ಬಿಗ್ ಬಾಸ್ ಕನ್ನಡ 10ನೇ ಸೀಸನ್‌ನ ರನ್ನರ್ ಅಪ್ ಆಗಿ ಡ್ರೋಣ್ ಪ್ರತಾಪ್ ಹೊರಹೊಮ್ಮಿದ್ದಾರೆ. ಅವರೇ ಹೇಳಿಕೊಂಡಂತೆ ಇದನ್ನು ಅವರು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ವರ್ತೂರ್ ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ನಂತರ ಬಿಗ್ ಬಾಸ್ ಮನೆಯಿಂದ ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.
ಮುಖ್ಯವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಕಿಚ್ಚ ಘೋಷಿಸಿದರು. ನಂತರ ವೇದಿಕೆಯ ಮೇಲೆ ಉಳಿದಿದ್ದು ಕಾರ್ತಿಕ್ ಮತ್ತು ಡ್ರೋಣ್ ಪ್ರತಾಪ್. ಕಿಚ್ಚನ ಒಂದು ಕೈಯಲ್ಲಿ ಕಾರ್ತಿಕ್ ಕೈ ಮತ್ತೊಂದು ಕೈಯಲ್ಲಿ ಪ್ರತಾಪ್ ಕೈ ಇತ್ತು. ಇಡೀ ಕರ್ನಾಟಕವೇ ಈ ದೃಶ್ಯವನ್ನು ಬಹಳ ಕುತೂಹಲದಿಂದ ವೀಕ್ಷಿಸಿತ್ತು. ಅದರಲ್ಲಿ ಸುದೀಪ್ ಅವರು ಕಾರ್ತಿಕ್ ಕೈಯನ್ನು ಎತ್ತಿ ಹಿಡಿದರು. ಡ್ರೋಣ್ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು. 10 ಲಕ್ಷ ರೂಪಾಯಿಗಳ ಬಹುಮಾನವನ್ನು ಪ್ರತಾಪ್ ಪಡೆದುಕೊಂಡಿದ್ದಾರೆ. ಡ್ರೋಣ್ ಪ್ರತಾಪ್ ಅವರ ಹಲವು ಏರಿಳಿತಗಳ ಜರ್ನಿಯನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ಜಿಯೋ ಸಿನಿಮಾ ಮಾಡಿದೆ.
ನೋವು-ನಲಿವು: ಈ ಸೀಸನ್‌ನ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ನೋವು ಮತ್ತು ಅಷ್ಟೇ ನಲಿವನ್ನು ಕಂಡ ಸದಸ್ಯ ಎಂದರೆ ಅದು ಡ್ರೋಣ್ ಪ್ರತಾಪ್ ಎಂದು ನಿಸ್ಸಂಶಯವಾಗಿ ಹೇಳಬಹುದು. ಅಸಮರ್ಥನಾಗಿ ಮನೆಯೊಳಗೆ ಪ್ರವೇಶಿಸಿದ ಪ್ರತಾಪ್, ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದರು. ಅವ ಸುಳ್ಳುಗಾರ, ಮೋಸಗಾರ ಎಂಬ ಮಾತುಗಳನ್ನು ಕೇಳಿಸಿಕೊಂಡರು. ತಮ್ಮೆದುರೇ ತಮ್ಮನ್ನು ಆಡಿಕೊಳ್ಳುವ, ತಮಾಷೆ ಮಾಡಿ ನಗುವ ಸದಸ್ಯರ ಮಾತಿಗೆ ಕಿವಿಯಾದರು. ಆದರೆ ಅವರು ಹಲವು ವರ್ಷಗಳ ನಂತರ ತಮ್ಮ ತಂದೆಯ ಜೊತೆ ಮಾತಾಡಿದ್ದು, ಎಷ್ಟೋ ವರ್ಷಗಳ ನಂತರ ಅಮ್ಮನನ್ನು ನೋಡಿದ್ದು ಕೂಡ ಇದೇ ಮನೆಯಲ್ಲಿ. ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದ್ದು ಬಿಗ್ ಬಾಸ್ ವೇದಿಕೆ ಮತ್ತು ಅದರ ವೀಕ್ಷಕರು.
ಕುಗ್ಗಿದ್ದ ಪ್ರತಾಪ್ ಕೈ ಹಿಡಿದ ಕಿಚ್ಚ: ಮೊದಲ ವಾರವೇ ಪ್ರತಾಪ್ ಅವರನ್ನು ಮನೆಯ ಸದಸ್ಯರ ಮಾತುಗಳು ಕುಗ್ಗಿಸಿದ್ದವು. ಅಲ್ಲಿ ಆದ ಅವಮಾನದಿಂದ ಬೇಸತ್ತ ಪ್ರತಾಪ್ ಬಾತ್ರೂಮ್ಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ವಿಶೇಷವಾಗಿ ತುಕಾಲಿ ಸಂತೋಷ್ ಅವರು ಪ್ರತಾಪ್ ಮೇಲೆ ಮಾಡಿದ ಜೋಕ್‌ಗಳು ಅವರನ್ನು ಸಾಕಷ್ಟು ನೋವನ್ನುಂಟು ಮಾಡಿದ್ದವು. ವಾರಾಂತ್ಯದಷ್ಟರಲ್ಲಿ ಸಾಕಷ್ಟು ನಿತ್ರಾಣಗೊಂಡಿದ್ದ ಪ್ರತಾಪ್ ಅವರ ಬೆಂಬಲಕ್ಕೆ ನಿಂತಿದ್ದು ಕಿಚ್ಚ ಸುದೀಪ್.
'ಇನ್ನೊಬ್ಬರನ್ನು ನೋಯಿಸಿ ಜೋಕ್ ಮಾಡುವುದು ಒಳ್ಳೆಯ ಹಾಸ್ಯದ ಲಕ್ಷಣವಲ್ಲ' ಎಂದು ತುಕಾಲಿ ಅವರನ್ನು ಎಚ್ಚರಿಸಿದ ಸುದೀಪ್, 'ಕೈ ಮುಗಿದರೆ ದೇವರೇ ಕ್ಷಮಿಸ್ತಾನಂತೆ. ನಾವ್ಯಾರು ಇನ್ನೊಬ್ಬರಿಗೆ ಶಿಕ್ಷೆ ಕೊಡೋಕೆ' ಎಂದು ಪ್ರತಾಪ್ ವಿರುದ್ಧ ಮುಗಿಬಿದ್ದವರಿಗೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದು ಪ್ರತಾಪ್ ಅವರಿಗೆ ಸಾಕಷ್ಟು ಆತ್ಮವಿಶ್ವಾಸ ತುಂಬಿತ್ತು. ಮನೆಯಲ್ಲಿ ಹೊಸ ಉತ್ಸಾಹದೊಂದಿಗೆ ಆಟಕ್ಕೆ ನಿಲ್ಲುವಂತೆ ಮಾಡಿತ್ತು.
ತಂತ್ರಗಾರಿಕೆಯಲ್ಲಿ ನಿಪುಣ: ಸದಾ ಒಬ್ಬಂಟಿಯಾಗಿ, ಯಾವುದರಲ್ಲಿಯೂ ಅಷ್ಟಾಗಿ ಪಾಲ್ಗೊಳ್ಳದ ಪ್ರತಾಪ್ ಅವರೊಳಗಿದ್ದ ತಂತ್ರಗಾರ ನಿಚ್ಚಳವಾಗಿ ಕಾಣಿಸಿಕೊಂಡಿದ್ದು ನಾಲ್ಕನೇ ವಾರದಲ್ಲಿ. ಆ ವಾರ ನಾಮಿನೇಷನ್ ಪಾಸ್‌ಗಳನ್ನು ಬಲೂನ್‌ನಲ್ಲಿ ತುಂಬಿ ಮನೆಯಿಡೀ ಬಲೂನ್‌ಗಳನ್ನು ಇಡಲಾಗಿತ್ತು. ಸದಸ್ಯರು ಬಲೂನ್‌ಗಳನ್ನು ಒಡೆದು ಅದರೊಳಗಿನ ಪಾಸ್‌ಗಳನ್ನು ಹುಡುಕಿ ತೆಗೆದುಕೊಳ್ಳಬೇಕಿತ್ತು. ಈ ಟಾಸ್ಕ್‌ನಲ್ಲಿ ಅತ್ಯಂತ ತಾಳ್ಮೆಯಿಂದಲೇ ಆಡಿದ ಪ್ರತಾಪ್ ಅವರಿಗೆ ಒಟ್ಟು ಐದು ಪಾಸ್‌ಗಳು ಸಿಕ್ಕಿದ್ದವು. ಒಬ್ಬರ ಕೈಯಿಂದ ಇನ್ನೊಬ್ಬರು ಪಾಸ್ ಅನ್ನು ಕಸಿದುಕೊಳ್ಳಬಹುದು ಎಂಬ ಕಾರಣಕ್ಕೆ ಪ್ರತಾಪ್ ಒಂದೇ ಒಂದು ಪಾಸ್ ಅನ್ನು ಕಿಸೆಯಲ್ಲಿಟ್ಟುಕೊಂಡು ಉಳಿದವನ್ನು ಮೈಕ್ ಕವರ್ ಒಳಗೆ ಇಟ್ಟಿದ್ದರು.
ಪ್ರತಾಪ್ ಬಳಿ ಇದ್ದ ಒಂದು ಪಾಸ್ ಅನ್ನು ಕಾರ್ತಿಕ್, ಸ್ನೇಹಿತ್ ಮತ್ತು ಮೈಕಲ್ ಸೇರಿಕೊಂಡು ಬಲವಂತವಾಗಿ ಕಿತ್ತುಕೊಂಡರು. ಹಾಗಾಗಿ ಪ್ರತಾಪ್ ಬಳಿ ಪಾಸ್‌ಗಳು ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪಾಸ್ ಗಳಿಸುವ ಅವಧಿ ಮುಗಿದಾಗ ಪ್ರತಾಪ್ ತಮ್ಮ ಬಳಿ ಇದ್ದ ಇನ್ನೂ ನಾಲ್ಕು ಪಾಸ್‌ಗಳನ್ನು ತೆರೆದು ತೋರಿಸಿದರು. ಅದನ್ನು ಕಂಡು ಮನೆಮಂದಿಯೆಲ್ಲರೂ ಬೆಕ್ಕಸ ಬೆರಗಾಗಿದ್ದಂತೂ ನಿಜ. ತಾವು ಒಡೆದ ಬಲೂನ್‌ಗಳ ಒಳಗೇ ಇದ್ದ ನಾಮಿನೇಷನ್ ಪಾಸ್‌ಗಳನ್ನೇ ಮನೆಯ ಉಳಿದ ಸದಸ್ಯರು ಗುರುತಿಸದೇ ನಿರ್ಲಕ್ಷಿಸಿದ್ದರು. ಅದನ್ನೂ ಪ್ರತಾಪ್ ಎತ್ತಿಕೊಂಡಿದ್ದರು.
ಇದಲ್ಲದೇ ಅಂದು ಅವರು ನಾಮಿನೇಷನ್ ಪಾಸ್‌ಗಳನ್ನು ಬಳಸಿಕೊಂಡು ಸೇವ್ ಮಾಡಿದ ನಾಲ್ಕು ಜನರೂ ಕೂಡ ಮಹಿಳಾ ಸ್ಪರ್ಧಿಗಳು ಎಂಬುದನ್ನೂ ಗಮನಿಸಬೇಕು. ಇದೂ ಕೂಡ ಪ್ರತಾಪ್ ತಂತ್ರಗಾರಿಕೆಯ ಭಾಗವೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಿತು. ಸೇಫ್ ಆದ ಅವರೆಲ್ಲರೂ ಬೇರೆ ಬೇರೆ ರೀತಿಯಲ್ಲಿ ಪ್ರತಾಪ್ ಬೆಂಬಲಕ್ಕೆ ನಿಂತಿದ್ದರು. ಇದಲ್ಲದೇ ಐದನೇ ವಾರವೂ ಅವರು ತಮ್ಮ ತಂತ್ರನಿಪುಣತೆಯನ್ನು ತೋರಿಸಿ ಮನೆಯ ಕ್ಯಾಪ್ಟನ್ ಆಗಿದ್ದರು. ಪಾಯಿಂಟ್ಸ್ ಖರೀದಿಸುವ ವಾರದಲ್ಲಿಯೂ ಪ್ರತಾಪ್ ಅವರ ಸ್ಟ್ರಾಟಜಿಯಿಂದಲೇ ಸಂಗೀತಾ ತಂಡ ಗೆಲುವು ಕಂಡಿದ್ದಲ್ಲದೇ, ಅವರ ತಂಡದಲ್ಲಿದ್ದ ನಮ್ರತಾ, ಪ್ರತಾಪ್ ಅವರ ಬೆಂಬಲದೊಂದಿಗೆ ಕ್ಯಾಪ್ಟನ್ ಕೂಡ ಆದರು. ಇಂಥ 10 ಹಲವು ನಿದರ್ಶನಗಳನ್ನು ಪ್ರತಾಪ್ ಜರ್ನಿಯಲ್ಲಿ ನೋಡಬಹುದು.
ದೀದಿಯರ ಮೆಚ್ಚಿನ ತಮ್ಮ: ಯಾವಾಗಲೂ ದೀದಿಯರ ಮಡಿಲಿನಲ್ಲಿಯೇ ಇರುತ್ತಾನೆ, ದೀದಿಯರ ಬೆಂಬಲ ಇಲ್ದಿದ್ರೆ ಅವ್ನತ್ರ ಏನೂ ಮಾಡಕ್ಕಾಗಲ್ಲ, ದೀದಿ ದೀದಿ ಅಂತಾ ಯಾವಾಗ್ಲೂ ಅದೇ ಆಯ್ತು - ಹೀಗೆ ಹತ್ತು ಹಲವು ಟೀಕೆಗಳನ್ನು ಪ್ರತಾಪ್ ಆಗಾಗ್ಗೆ ಕೇಳಿಸಿಕೊಂಡಿದ್ದಿದೆ. ಆದರೆ ಅವರು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮನೆಯೊಳಗೆ ದೀದಿಯರ ಮೆಚ್ಚಿನ ತಮ್ಮನಾಗಿದ್ದದ್ದು ಅವರ ಜರ್ನಿಯನ್ನು ಎಷ್ಟೋ ಸಹನೀಯಗೊಳಿಸಿದ್ದಂತೂ ನಿಜ.