ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್ 11' ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಪಾಪ್ಯುಲರ್ ಪ್ರೋಗ್ರಾಮ್ ಮೂರನೇ ವಾರವನ್ನೂ ಆರಂಭಿಸಿದೆ. ಕಳೆದ ಎರಡು ದಿನ ವಾರದ ಕತೆ ಕಿಚ್ಚನ ಜೊತೆ, ಸೂಪರ್ ಸಂಡೇ ವಿತ್ ಸುದೀಪ್ ಸಂಚಿಕೆಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಆದ್ರೆ, ನಿನ್ನೆ ರಾತ್ರಿ ಸುದೀಪ್ ತಮ್ಮ ಈ ಕಾರ್ಯಕ್ರಮಕ್ಕೆ ವಿದಾಯ ಘೋಷಿಸಿದ್ದಾರೆ. ಇಂದು ಬಿಗ್ ಬಾಸ್ ಕೂಡಾ ಸ್ಪರ್ಧಿಗಳ ವಿರುದ್ಧ ಅಸಮಾಧಾನಗೊಂಡು ಮನೆಯಿಂದ ಹೊರನಡೆದಿದ್ದಾರೆ.
ಬಿಗ್ ಬಾಸ್ ಪ್ರೋಮೋ: ''ಬಿಗ್ ಬಾಸೇ ಮನೆಯಿಂದ ಹೊರಬಂದ್ರೆ, ಮುಂದೇನು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್ನೊಂದಿಗೆ ಕಲರ್ಸ್ ಕನ್ನಡ ತನ್ನ ವಿವಿಧ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ.
ಮನೆಯಲ್ಲಿ ಫೋನ್ ರಿಂಗ್ ಆಗಿದೆ. ಕ್ಯಾಪ್ಟನ್ ಶಿಶಿರ್ ಹೋಗಿ ಕಾಲ್ ರಿಸೀವ್ ಮಾಡಿದ್ದಾರೆ. ಶಿಶಿರ್ ಹಲೋ ಎಂದಿದ್ದು, ಬಿಗ್ ಬಾಸ್ ಕೋಪದ ಧ್ವನಿಯಲ್ಲಿ ಹಲೋ ಎಂದಿದ್ದಾರೆ. ನಂತರ 'ಇದು ಬಿಗ್ ಬಾಸ್, ನಿಮ್ಮೆಲ್ಲರ ವರ್ತನೆಯಿಂದ ನಂಗೆ ತುಂಬಾ ನೋವಾಗಿದೆ. ಥ್ಯಾಂಕ್ ಯೂ ವೆರಿ ಮಚ್' ಎಂದು ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಕ್ಯಾಪ್ಟನ್ ಶಿಶಿರ್ ಥ್ಯಾಂಕ್ ಯೂ ಬಿಗ್ ಬಾಸ್ ಎಂದು ಉತ್ತರಿಸಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಬಿಗ್ ಬಾಸ್, 'ಏನ್ ಥ್ಯಾಂಕ್ ಯೂ ಹೇಳ್ತಿದ್ದೀರಲ್ವಾ?. ಉಡಾಫೆತನ, ಅಪ್ರಾಣಿಕ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಗ್ ಬಾಸ್ ನಿಮ್ಮೊಂದಿಗೆ ಇರಲ್ಲ. ನಾನು ಬ್ರೇಕ್ ತಗೊಳ್ತಾ ಇದ್ದೀನಿ' ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಈ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಪ್ರೇಕ್ಷಕರು ಸಂಪೂರ್ಣ ಸಂಚಿಕೆ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದಾರೆ.