ಮುಂಬೈ: ಜನಪ್ರಿಯ ರಿಯಾಲಿಟಿ ಶೋ 'ಹಿಂದಿ ಬಿಗ್ ಬಾಸ್ ಒಟಿಟಿಯ ಮೂರನೇ ಸೀಸನ್'ನ ಅದ್ಧೂರಿ ಫಿನಾಲೆ ಶುಕ್ರವಾರ ಸಂಜೆ ಜರುಗಿತು. ಗ್ರ್ಯಾಂಡ್ ಫಿನಾಲೆಯಲ್ಲಿ ನಟಿ ಸನಾ ಮಕ್ಬುಲ್ ವಿಜೇತರಾಗಿ ಹೊರಹೊಮ್ಮಿದರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಇವರು ಪ್ರತಿಷ್ಠಿತ ಟ್ರೋಫಿ ಜೊತೆಗೆ 25 ಲಕ್ಷಕ್ಕೂ ಹೆಚ್ಚು ಮೊತ್ತದ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಸನಾ ಮಕ್ಬುಲ್ ಗೆಲುವು: ಅತ್ಯಂತ ಸವಾಲಿನ ಬಿಗ್ ಬಾಸ್ ಮನೆಯಲ್ಲಿ ಒಂದು ತಿಂಗಳ ಕಾಲ ಕಳೆದ ಸನಾ ಮಕ್ಬುಲ್ ಫೈನಲಿಸ್ಟ್‌ಗಳಾದ ರಣ್ವೀರ್ ಶೋರೆ, ಕೃತಿಕಾ ಮಲಿಕ್, ಸಾಯಿ ಕೇತನ್ ರಾವ್ ಮತ್ತು ನೇಝಿ ಅವರೊಂದಿಗೆ ವೇದಿಕೆ ಅಲಂಕರಿಸಿದ್ದರು. ಅಂತಿಮವಾಗಿ, ಜನಪ್ರಿಯ, ಹಿರಿಯ ನಟ ಅನಿಲ್ ಕಪೂರ್ ಸನಾ ಮಕ್ಬುಲ್ ಅವರನ್ನು ವಿನ್ನರ್ ಎಂದು ಘೋಷಿಸಿದರು.
ಬಿಗ್ ಬಾಸ್ ಒಟಿಟಿ 3 ಗ್ರ್ಯಾಂಡ್ ಫಿನಾಲೆ: ಅಪಾರ ಸಂಖ್ಯೆಯ ವೀಕ್ಷಕರನ್ನು ಸಂಪಾದಿಸಿರುವ, ಭಾರತದ ಬಹು ನಿರೀಕ್ಷಿತ 'ಹಿಂದಿ ಬಿಗ್ ಬಾಸ್ ಒಟಿಟಿಯ ಮೂರನೇ ಸೀಸನ್'ನ ಗ್ರ್ಯಾಂಡ್ ಫಿನಾಲೆ ಆಗಸ್ಟ್ 2ರಂದು ಪ್ರಸಾರವಾಯಿತು. ಬಾಲಿವುಡ್ ಸೂಪರ್ ಸ್ಟಾರ್ ಅನಿಲ್ ಕಪೂರ್ ಕಾರ್ಯಕ್ರಮ ನಿರೂಪಿಸಿದರು. ಸನಾ ಮಕ್ಬುಲ್ ವಿಜೇತರಾಗಿ ಹೊರಹೊಮ್ಮಿದರು. ಸಮರ್ಥ ವ್ಯಕ್ತಿತ್ವ ಮತ್ತು ಸ್ಟ್ರ್ಯಾಟಜಿಕ್ ಆಟಕ್ಕೆ ಇವರು ಹೆಸರುವಾಸಿಯಾಗಿದ್ದಾರೆ. ಬಿಗ್ ಬಾಸ್ ಎಂಬ ಭಾವನಾತ್ಮಕ ಮತ್ತು ಸವಾಲಿನ ಪ್ರಯಾಣದಲ್ಲಿ, ಸ್ಥಿತಿಸ್ಥಾಪಕತ್ವ ಪ್ರದರ್ಶಿಸಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಭಾವನಾತ್ಮಕ ಪಯಣ: ಫಿನಾಲೆ ನಂತರದ ಸಂದರ್ಶನದಲ್ಲಿ ಮಾತನಾಡಿದ ಸನಾ, ಬಿಗ್ ಬಾಸ್ ಮನೆಯೊಳಗಿನ ತಮ್ಮ ಭಾವನಾತ್ಮಕ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. "ಬಿಗ್ ಬಾಸ್ ಮನೆಯಲ್ಲಿ, ಎಲ್ಲವೂ ಮಿಶ್ರ ಭಾವನೆಗಳು" ಎಂದು ಬಹಿರಂಗಪಡಿಸಿದರು. "ಮೊದಲ ಎರಡು ವಾರಗಳ ಕಾಲ ಎಲ್ಲವೂ ಸರಿಯಾಗಿದೆ ಎಂದು ತೋರುತ್ತದೆ. ಆದ್ರೆ ಆಟ ಮುಂದುವರೆದಂತೆ, ವಿಷಯಗಳು ಬದಲಾಗುತ್ತವೆ. ವಿಷಯಗಳಷ್ಟೇ ಅಲ್ಲ, ಜನರು ಕೂಡಾ ಬದಲಾಗುತ್ತಾರೆ. ಈ ಬದಲಾವಣೆ ನಿರಂತರ. ನಿಮ್ಮೊಟ್ಟಿಗೆ ಕುಳಿತುಕೊಳ್ಳುವವರು ನಿಮ್ಮ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಾರೆ. ಒಟ್ಟಿಗೆ ಕುಳಿತುಕೊಳ್ಳದವರು ನಿಮ್ಮ ಹಿಂದೆ ಇನ್ನೂ ಹೆಚ್ಚು ಮಾತನಾಡುತ್ತಾರೆ" ಎಂದು ತಿಳಿಸಿದರು.
ಕಠಿಣ ಕ್ಷಣ: ಸನಾ ಏಕಾಂಗಿಯಾಗಿ ಅನುಭವಿದ ಕಠಿಣ ಕ್ಷಣಗಳ ಮೇಲೂ ಬೆಳಕು ಚೆಲ್ಲಿದರು. "ನಾನು ಒಬ್ಬಂಟಿಯಾಗುವ ಒಂದು ಹಂತ ಎದುರಾಯಿತು. ಮನೆಯಲ್ಲಿ ಗುಂಪುಗಳು ರೂಪುಗೊಳ್ಳುತ್ತಿದ್ದವು. ನಂತರ ನನ್ನ ಸ್ನೇಹಿತರು ದೂರವಾಗಲು ಪ್ರಾರಂಭಿಸಿದರು. ಅದು ನಾನು ಮಾಡಿಕೊಂಡ ಸ್ನೇಹವೇ, ನನ್ನನ್ನು ಅರ್ಥಮಾಡಿಕೊಂಡು, ಮುದ್ದಿಸಿ, ನಗಿಸುತ್ತಿದ್ದವರು ನಂತರದ ದಿನಗಳಲ್ಲಿ ದೂರವಾದರು" ಎಂದು ತಿಳಿಸಿದರು.