ಬೆಂಗಳೂರು: ಬಿಗ್ ಬಾಸ್ ಸೀಸನ್ 11 ಪ್ರಮುಖ ಮನರಂಜನಾ ಅಭ್ಯರ್ಥಿಯಾಗಿದ್ದ ಲಾಯರ್ ಜಗದೀಶ್ ಮತ್ತು ರಂಜಿತ್ಗೆ ಮನೆಯಿಂದ ಹೊರ ಹೋಗುವಂತೆ ಬಿಗ್ಬಾಸ್ ತಾಕಿತ್ತು ಮಾಡಿದ್ದಾರೆ. ಇದರಿಂದ ಇದೀಗ ಮನೆಯಲ್ಲಿ ಅಶಾಂತಿ ಜೊತೆ ದುಃಖದ ವಾತಾವರಣ ನಿರ್ಮಾಣವಾಗಿದೆ. ಬಿಗ್ ಬಾಸ್ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ರಂಜಿತ್ ಲಾಯರ್ ಜಗದೀಶ್ ಮೇಲೆ ತಳ್ಳಾಟ ನಡೆದಿರುವುದು ಕಂಡು ಬಂದಿದೆ. ಈ ಹಿಂದೆ ಬಿಗ್ ಬಾಸ್ ಸೀಸನ್ 3ರಲ್ಲೂ ಇದೇ ರೀತಿ ಸಹ ಸ್ಪರ್ಧಿಯೊಬ್ಬರ ಮೇಲೆ ಕೈ ಮಾಡಿ ಹುಚ್ಚ ವೆಂಕಟ್ ಮನೆಯಿಂದ ಹೊರ ನಡೆದಿದ್ದರು. ಇದೀಗ ಅದೇ ರೀತಿಯ ಘಟನೆ ಮನೆಯಲ್ಲಿ ಮರುಕಳಿಸಿದೆ.
ಏನಿದು ಗಲಾಟೆ?: ಬಿಗ್ ಬಾಸ್ ಆರಂಭವಾದಾಗಿನಿಂದ ಲಾಯರ್ ಜಗದೀಶ್ ತಾವೇ ಕಿಂಗ್ ಮೇಕರ್ ಎಂಬ ಭಾವನೆಯಲ್ಲಿ ಸಹ ಸ್ಪರ್ಧಿಗಳು ಸೇರಿದಂತೆ ಬಿಗ್ ಬಾಸ್ಗೂ ಸವಾಲೆಸೆಯುತ್ತಾ ಬಂದಿದ್ದಾರೆ. ಆದರೆ, ನಿನ್ನೆ ನಡೆದ ಸಂಚಿಕೆಯಲ್ಲಿ ಅವರು ಮಹಿಳಾ ಅಭ್ಯರ್ಥಿಗಳ ವಿರುದ್ಧ ಏಕ ವಚನ ಬಳಕೆ ಮಾಡಿದ್ದಾರೆ. ಇದರಿಂದಾಗಿ ಮನೆಯ ಸದಸ್ಯರ ಆಕ್ರೋಶ ಕಟ್ಟೆ ಒಡೆದು ಚೈತ್ರಾ, ಹಂಸ, ಮಾನಸ, ಭವ್ಯ, ರಂಜಿತ್. ಉಗ್ರಂ ಮಂಜು ಒಟ್ಟಾಗಿ ಲಾಯರ್ ಜಗದೀಶ್ ವಿರುದ್ಧ ತಿರುಗಿಬಿದ್ದಿದ್ದು, ಮನೆ ಅಕ್ಷರಶಃ ರಣರಂಗವಾಗಿದೆ.
ತಳ್ಳಾಟ ನಡೆಸಿದ ಸ್ಪರ್ಧಿಗಳು: ಗೋಲ್ಡ್ ಸುರೇಶ್ ಜೊತೆಗೆ ಸಂಭಾಷಣೆ ನಡೆಸುತ್ತಿದ್ದ ಲಾಯರ್ ಜಗದೀಶ್ ಹಂಸ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಸುರೇಶ್ ಇದನ್ನು ಖಂಡಿಸಿದ್ದಾರೆ. ಅಲ್ಲದೇ, ಈ ಕುರಿತು ಮನೆಯ ಇತರ ಸದಸ್ಯರಿಗೆ ತಿಳಿಸಿದಾಗ ಅಸಲಿ ಆಟ ಆರಂಭವಾಗಿದೆ. ಲಾಯರ್ ಜಗದೀಶ್ ಮಾತಿನಿಂದ ಆಕ್ರೋಶಗೊಂಡ ಮನೆಯ ಇತರ ಸದಸ್ಯರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಧ್ವನಿ ಏರಿಸಿದ್ದಾರೆ. ಈ ವೇಳೆ ಆರಂಭವಾದ ಕಿತ್ತಾಟ ಕಡೆಗೆ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋಗಿದೆ.