ಬಿಗ್ ಬಾಸ್. ಇದು ವ್ಯಕ್ತಿತ್ವಗಳ ಅನಾವರಣ. ಬಿಗ್ ಬಾಸ್ ಅನ್ನೋದೇ ಒಂದು ಎಮೋಷನ್. ಒಂದೊಳ್ಳೆ ವ್ಯಕ್ತಿತ್ವದ ಗೆಲುವು ನಿರ್ಧರಿಸೋದು ಪ್ರೇಕ್ಷಕರು. ಅದರಂತೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರೋ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11'ನ್ನು ಗ್ರಾಮೀಣ ಪ್ರತಿಭೆ ಹನುಮಂತು ಗೆದ್ದುಕೊಂಡಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್ ನಿರೂಪಣೆಯ ಕೊನೆ ಸೀಸನ್ನಲ್ಲಿ ಹೈಳ್ಳಿ ಹೈದ ಗೆಲುವಿನ ನಗೆ ಬೀರಿದ್ದು, ತಾನೇ ಗೆದ್ದಂತೆ ಸಂಭ್ರಮಾಚರಣೆ ಮಾಡಿದ್ದಾರೆ ಅಪ್ಪಟ ದೋಸ್ತ್.
ಬಿಗ್ ಬಾಸ್ ವಿವಿಧ ಭಾಷೆಗಳಲ್ಲಿ ಪ್ರಸಾರ ಕಾಣುತ್ತದೆ. ಈ ರಿಯಾಲಿಟಿ ಶೋನಲ್ಲಿ ಸ್ನೇಹ, ಪ್ರೀತಿ ಸಹಜ. ಅದರಂತೆ ಕನ್ನಡದ ಬಿಗ್ ಬಾಸ್ 11ರಲ್ಲೂ ಗಮನ ಸೆಳೆದಿದ್ದು ಹನುಮಂತು ಮತ್ತು ಧನರಾಜ್ ಆಚಾರ್ ಅವರ ನಿಷ್ಕಲ್ಮಶ ಸ್ನೇಹ. ಇಡೀ ಸೀಸನ್ನಲ್ಲಿ ಈ ಫ್ರೆಂಡ್ಶಿಪ್ ಹೈಲೆಟ್ ಆಗಿತ್ತು. ನಿರೂಪಕ ಕಿಚ್ಚ ಸುದೀಪ್ ಅವರ ಮೆಚ್ಚುಗೆಯನ್ನೂ ಸ್ವೀಕರಿಸಿತ್ತು. ಇದೀಗ ತನ್ನ ಗೆಳೆಯನ ಗೆಲುವನ್ನು ತಾನೇ ಗೆದ್ದಷ್ಟು ಸಂಭ್ರಮಿಸಿದ್ದಾರೆ ಧನರಾಜ್ ಆಚಾರ್.
ಹೌದು, ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಧನರಾಜ್ ಆಚಾರ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ವಿನ್ನರ್ ಹನುಮಂತು ಅವರೊಂದಿಗೆ ಇರೋ ಫೋಟೋ ಹಂಚಿಕೊಂಡ ಅವರು, ''ದೋಸ್ತಾ ನೀ ಮಸ್ತಾ. ಗೆಲುವು ನಿನ್ನದು, ಖುಷಿ ನನ್ನದು, ಇದು ದೋಸ್ತಿ ಗೆಲುವು ದೋಸ್ತಾ. ಇರು ನೀ ಜೊತೆಗಿರು ಎಂದೆಂದಿಗೂ'' ಎಂದು ಬರೆದುಕೊಂಡಿದ್ದಾರೆ.