ಬಿಗ್ ಬಾಸ್ ಹತ್ತನೇ ಸೀಸನ್‌ನ ಅಂತಿಮ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ನಮ್ರತಾ ಎಲಿಮಿನೇಷನ್ ಮಾರ್ಗವಾಗಿ ಮನೆಯಿಂದ ಹೊರಬಿದ್ದಿದ್ದಾರೆ. ''ಬಿಗ್ ಬಾಸ್ನ ಈ ಸೀಸನ್‌ನಲ್ಲಿ ನಿಮ್ಮ ಕಾಂಟ್ರಿಬ್ಯೂಷನ್ ನಿಜಕ್ಕೂ ಮಹತ್ವದ್ದು. ನೀವು ಯಾರು ಎಂದು ನನಗೂ ತೋರಿಸಿಕೊಟ್ಟಿದ್ದೀರಿ'' ಎಂಬ ಮೆಚ್ಚುಗೆಯ ಮಾತುಗಳನ್ನು ಕಿಚ್ಚನ ಬಾಯಿಂದಲೇ ಕೇಳಿಸಿಕೊಂಡಿರುವ ನಮ್ರತಾ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ತಮ್ಮ ಪಯಣದ ಬಗ್ಗೆ ಜಿಯೋ ಸಿನಿಮಾದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಎಲಿಮಿನೇಷನ್ ಶಾಕ್! ''ನಾನು ನಿಮ್ಮ ನಮ್ರತಾ ಎಂದು ಮಾತು ಆರಂಭಿಸಿದ ಎಲಿಮಿನೇಟೆಡ್ ಕಂಟಸ್ಟೆಂಟ್, ಬಿಗ್ ಬಾಸ್ ಹತ್ತನೇ ಸೀಸನ್‌ನ ಟಾಪ್ ಸೆವೆನ್ ಸ್ಪರ್ಧಿಗಳಲ್ಲಿ ಒಬ್ಬಳು ನಾನು. ನಿಜಕ್ಕೂ ಬಹಳ ಬೇಸರವಾಗುತ್ತಿದೆ. 19 ಸ್ಪರ್ಧಿಗಳ ಪೈಕಿ, ಏಳನೇ ಸ್ಥಾನಕ್ಕೆ ತಲುಪಿದ್ದು ಖಂಡಿತ ಸುಲಭದ ಸಂಗತಿಯಲ್ಲ. ಇತ್ತೀಚೆಗೆ ಹಳೇ ಸ್ಪರ್ಧಿಗಳೆಲ್ಲ ಬಂದು ಒಂದು ಬಾಂಬ್ ಹಾಕ್ತಾರೆ. ನಿಂಗೆ ಚಾನ್ಸ್ ಇಲ್ಲ ಅಂತಾ ಹೇಳ್ತಾರೆ. ಆಗ ನನ್ನ ಆತ್ಮವಿಶ್ವಾಸ ಕುಗ್ಗಲು ಶುರುವಾಯ್ತು. ಆದರೂ ನನ್ನನ್ನು ನಾನು ಸಂಭಾಳಿಸಿಕೊಂಡು ಆಟ ಆಡಲು ಶುರುಮಾಡಿದೆ. ಇದೀಗ ಮನೆಯಿಂದ ಹೊರಗೆ ಬಂದಿದ್ದು ನಿಜಕ್ಕೂ ಶಾಕ್'' ಆಗಿದೆ ಎಂದು ತಿಳಿಸಿದರು.
'ನನ್ನದು ಏರಿಳಿತದ ಪಯಣ': ಈ 106 ದಿನಗಳ ಪಯಣವನ್ನು ಸಣ್ಣದಾಗಿ ವಿವರಿಸಲು ಸಾಧ್ಯವೇ ಇಲ್ಲ. ಅದರಲ್ಲಿಯೂ ನನ್ನ ಜರ್ನಿ ನಿಜವಾಗಿಯೂ ಏರಿಳಿತದ ಪಯಣವಾಗಿತ್ತು. ಎಲ್ಲಿಂದಲೋ ಶುರುಮಾಡಿ ಎಲ್ಲಿಗೋ ಹೋಗಿ, ಕೆಳಗೆ ಇಳಿದು ಮತ್ತೆ ಮೇಲೆ ಏರಿ ಹೋದ ಜರ್ನಿ ನನ್ನದು ಎಂದು ಹೇಳಿದರು.
ಸ್ನೇಹಿತರ ಜೊತೆ ಮಾತನಾಡುವುದು ನನಗೆ ತುಂಬಾ ಖುಷಿ ಕೊಟ್ಟಿತ್ತು. ಆದರೆ ಆ ಫ್ರೆಂಡ್ಷಿಪ್ನಲ್ಲಿ ಮಾತನಾಡುತ್ತಿದ್ದಾಗ ಬೇರೆಯವರ ಬಗ್ಗೆ ಒಂದು ಒಪಿನಿಯನ್ ಕ್ರಿಯೇಟ್ ಆಗುತ್ತದೆ. ಅವರು ಕೆಟ್ಟವರು, ಇವರು ಒಳ್ಳೆಯವರು ಎಂದೆಲ್ಲಾ ಬರುತ್ತದೆ. ಆದ್ರೆ ಹೋಗ್ತಾ ಹೋಗ್ತಾ ನಾನು ಮೈಚಳಿ ಬಿಟ್ಟು ಅವರ ಜೊತೆಗೆ ಸೇರಲು ಪ್ರಾರಂಭಿಸಿದಾಗ, ಅವರು ನಾನು ಅಂದುಕೊಂಡಷ್ಟು ಕೆಟ್ಟವರಲ್ಲ ಎನಿಸಿತು. ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ. ಆದರೆ ಆಯಾ ಸಂದರ್ಭದಲ್ಲಿ ಎಲ್ಲರೂ ಕೆಟ್ಟವರ ಹಾಗೆ ಕಾಣಿಸುತ್ತಿರುತ್ತಾರೆ. ನಾನೂ ಅಂಥ ಕೆಲ ಸಂದರ್ಭಗಳಲ್ಲಿ ಕೆಟ್ಟವಳಾಗಿರುತ್ತೇನೆ ಎಂದರು.
ಸಣ್ಣ-ಪುಟ್ಟ ತಪ್ಪುಗಳಾಗಿರಬಹುದು:ಬಿಗ್ ಬಾಸ್ ಮನೆಯಲ್ಲಿ ನಾನು ಸಣ್ಣ-ಪುಟ್ಟ ತಪ್ಪುಗಳನ್ನು ಮಾಡಿರಬಹುದು. ಆದರೆ ಕೆಲವರು ಹೇಳುವಂತೆ ಶ್ಯಾಡೋ, ಇನ್‌ಪ್ಲ್ಯೂಯೆನ್ಸ್ ಎಲ್ಲಾ ಆಗಿಲ್ಲ. ನಾನು ನಿಜವಾದ ಸ್ನೇಹಿತರನ್ನು ಕಂಡುಕೊಂಡಿದ್ದೇನೆ. ಆರಂಭದಲ್ಲಿ ಗೇಮ್ ಆಡಲು, ಸ್ಟ್ರಾಟಜಿ ಮಾಡಲು ಗೊತ್ತಾಗುತ್ತಿರಲಿಲ್ಲ. ಆದರೆ ಕಲಿಯುತ್ತ ಬಂದೆ. ಕಲಿಯುವಷ್ಟರಲ್ಲಿ ಸ್ವಲ್ಪ ಸಮಯ ತಗುಲಿತು ಅಷ್ಟೇ. ನಂತರ ನಾನು ಆಟದಲ್ಲಿ ಇಳಿದೆ ಎಂದು ಹೇಳಿದರು.
ಇದೊಂದು ಸೋಲ್‌ಫುಲ್ ಜರ್ನಿ: ಬಿಗ್ ಬಾಸ್ ಮನೆಯಲ್ಲಿ ಕಳೆದ ಅಷ್ಟೂ ದಿನಗಳು ನನ್ನ ಪಾಲಿಗೆ ಸೋಲ್‌ಫುಲ್ ಜರ್ನಿ. ಇಲ್ಲಿ ಯಾರೂ ಕೆಟ್ಟವರಲ್ಲ. ಈ ಪ್ರಯಾಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ರಿಯಲ್ ಫ್ರೆಂಡ್‌ಷಿಪ್ ಮನೆ ಹೊರಗೂ ಮುಂದುರಿಯುತ್ತದೆ ಅಂದುಕೊಂಡಿದ್ದೇನೆ. ಎಲ್ಲರ ಜೊತೆಗೂ ಸಂಪರ್ಕದಲ್ಲಿ ಇರಲು ಬಯಸುತ್ತೇನೆ ಎಂದು ತಿಳಿಸಿದರು.
ಸಂಗೀತಾ ಉತ್ತಮ ಸ್ನೇಹಿತೆ: ನನ್ನ-ಸಂಗೀತ ನಡುವಿನ ಫ್ರೆಂಡ್‌ಷಿಪ್ ಅನ್ನು ಒಂದೇ ಪದದಲ್ಲಿ ಹೇಳಬೇಕು ಅಂದರೆ ಅದು 'ಸಿಸ್ಟರ್ಹುಡ್'. ನನಗೆ ಆ ರೀತಿ ಬಾಂಡಿಂಗ್ ಆಗೋದು ಕಡಿಮೆ. ಆದರೆ ಇಲ್ಲಿ ಆಯ್ತು. ಸಂಗೀತಾ ಏನೇ ಇದ್ರೂ ಮುಖದ ಮೇಲೇ ಹೇಳ್ತಾರೆ. ನೀನು ಇಲ್ಲಿ ತಪ್ಪು ಮಾಡಿದೆ. ಇದು ಸರಿ ಎಂಬುದನ್ನು ನೇರವಾಗಿ ಹೇಳ್ತಾರೆ. ಅಂಥ ಕ್ರಿಟಿಕ್ ಎಲ್ಲರ ಬದುಕಿನಲ್ಲಿಯೂ ಇರಬೇಕು ಅನಿಸುತ್ತದೆ.
'ಅಣ್ಣನ ಸ್ಥಾನ ವಿನಯ್ ತುಂಬಿದ್ದಾರೆ': ನನಗೆ ಅಣ್ಣ ಇಲ್ಲ ಎಂಬ ಕೊರಗು ಇತ್ತು. ಆ ಸ್ಥಾನವನ್ನು ವಿನಯ್ ತುಂಬಿದ್ದಾರೆ. ಹೊರಗಡೆ ಕೂಡ ಆ ಬಾಂಧವ್ಯವನ್ನು ಮುಂದುವರಿಸಲು ಬಯಸುತ್ತೇನೆ. ಇಡೀ ಮನೆಯಲ್ಲಿ ನನಗೆ ಬೇಗನೇ ಮನಸ್ಸಿಗೆ ಹತ್ತಿರವಾದವರು ಪ್ರತಾಪ್. ಆವಾಗವಾಗ ವಿಯರ್ಡ್ ಆಗಿ ಆಡ್ತಾನೆ ನಿಜ. ಆದರೆ ಅವರು ಇರೋದೇ ಹಾಗೆ. ಅವರನ್ನು ಹಾಗೇ ಒಪ್ಪಿಕೊಂಡಿದ್ದೇನೆ ನಾನು. ಮೊದಲು ಅವರು ಒಪಿನಿಯನ್ ಹೇಳುವಾಗ, ಕಮೆಂಟ್ ಮಾಡುವುದನ್ನು ಕೇಳುವಾಗ ಕೋಪ ಬರುತ್ತಿತ್ತು. ಏನಾದ್ರೂ ಹೇಳಿದ್ರೆ ಪರ್ಸನಲ್ ಆಗಿಟ್ಟುಕೊಂಡು ಬಹಳ ದಿನ ಅದನ್ನೇ ಸಾಧಿಸ್ತಿದ್ದರು. ಆದ್ರೀಗ ಬಹಳ ಬದಲಾಗಿದ್ದಾರೆಂದು ತಿಳಿಸಿದರು.