ಬಿಗ್‌ಬಾಸ್ ಮನೆಯಲ್ಲಿ 'ಬೆಂಕಿ' ಎಂದೇ ಎಲ್ಲರಿಂದಲೂ ಹೇಳಿಸಿಕೊಳ್ಳುತ್ತಿದ್ದವರು ತನಿಷಾ ಕುಪ್ಪಂಡ. ಸ್ನೇಹಿತರಿಗೆ ಬೆಚ್ಚನೆಯ ಭಾವ ನೀಡುತ್ತ, ಎದುರಾಳಿಯಾಗಿ ನಿಂತರೆ ಸುಡುವ ಕೋಪವನ್ನೂ ತೋರುತ್ತಿದ್ದವರಿಗೆ ಈ ಬಿರುದು ಒಪ್ಪುವಂಥದ್ದೇ. ಮಧ್ಯದಲ್ಲಿ ಕಾಲು ನೋವಾಗಿ ವಾಪಸ್ ಬರುತ್ತಾರೋ ಇಲ್ಲವೋ ಎಂಬ ಹಂತ ತಲುಪಿದರೂ, ಬಿಡದೇ ವಾಪಸ್ ಬಂದು ಸಾಕಷ್ಟು ಆಟವಾಡಿ ನೂರಕ್ಕೂ ಅಧಿಕ ದಿನ ಉಳಿದಿಕೊಂಡಿದ್ದ ತನಿಷಾ ಕುಪ್ಪಂಡ ಕಳೆದ ವಾರ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಗೆ ಬಂದಿದ್ದರು.
'ಇನ್ನಷ್ಟು ದಿನ ಉಳಿದುಕೊಳ್ಳುತ್ತೇನೆ' ಎಂಬ ವಿಶ್ವಾಸದಲ್ಲಿಯೇ ಇದ್ದ ಅವರಿಗೆ ಎಲಿಮಿನೇಷನ್ ಶಾಕ್ ಕೊಟ್ಟಿತ್ತು. ಅದರಿಂದಾಗಿ ಮನೆಯಿಂದ ಹೊರ ಹೋಗುವಾಗ ಮನೆಯ ಸದಸ್ಯರಿಗೂ ಜರಿದು, 'ಬಿಗ್‌ಬಾಸ್ ಯಾಕಿಷ್ಟು ಕೆಟ್ಟದಾಗಿ ಕಳಿಸಿಕೊಡ್ತೀರಾ?' ಎಂದು ಕೇಳುತ್ತಲೇ ಕಣ್ಣೀರು ಹಾಕಿದ್ದರು. ಆದರೆ ಈ ವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಮತ್ತೆ ವೇದಿಕೆಗೆ ಬಂದು ಕಿಚ್ಚನ ಜೊತೆಗೆ ಬಿಚ್ಚು ಮಾತುಗಳನ್ನಾಡಿದ ತನಿಷಾ ಕುಪ್ಪಂಡ ಮನೆಯಿಂದ ಹೊರಗೆ ಬಂದ ಕೂಡಲೇ ಜಿಯೋ ಸಿನಿಮಾಗೆ ಎಕ್ಸ್‌ಕ್ಲ್ಯೂಸಿವ್ ಸಂದರ್ಶನ ನೀಡಿದ್ದಾರೆ. ಅದರ ಅಕ್ಷರ ರೂಪ ಇಲ್ಲಿದೆ.
- ಮಿಡ್ ವೀಕ್ ಎಲಿಮಿನೇಷನ್ ಅನುಭವ ಹೇಗಿತ್ತು?
ಆ ಸಂದರ್ಭದಲ್ಲಿ ತುಂಬ ಬೇಜಾರಾಯ್ತು ನನಗೆ. ನಾನು ಇನ್ನಷ್ಟು ದಿನ ಉಳಿದುಕೊಳ್ಳಲು ಅರ್ಹಳು ಎಂಬ ಆತ್ಮವಿಶ್ವಾಸದಲ್ಲಿಯೇ ಇದ್ದೆ. ಆ ನಂಬಿಕೆ ಮುರಿದುಹೋಯಿತು ಎಂಬ ಬೇಜಾರಿದೆ. ಆದರೆ ಆಚೆ ಬಂದು ಸ್ವಲ್ಪ ರಿಲ್ಯಾಕ್ಸ್ ಆಗಿ ಯೋಚಿಸಿದಾಗ ನನ್ನ ಜರ್ನಿ ನನಗೆ ಖುಷಿ ಕೊಟ್ಟಿದೆ. ನಾನು ಮಾಡಬೇಕಾದ ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದೇನೆ. ಹಾಗಾಗಿ ನಾನು ಬಿಗ್‌ಬಾಸ್ ಮನೆಯ ಒಳಗೆ ಇದ್ದಾಗ ಎಷ್ಟು ಖುಷಿಯಾಗಿದ್ದೆನೊ, ತೃಪ್ತಳಾಗಿದ್ದೆನೋ, ಆಚೆ ಬಂದಾಗಲೂ ಹಾಗೆಯೇ ಇದ್ದೇನೆ. ಎಲ್ಲರ ಮನೆಯ ಮಗಳಾಗಿದ್ದೇನೆ ನಾನು. ತುಂಬ ಖುಷಿ ಕೊಟ್ಟ ಪಯಣ ಇದು.
- ಬಿಗ್‌ಬಾಸ್ ಮನೆಯಿಂದ ಯಾಕೆ ಹೊರಗೆ ಬಂದಿರಿ?
ತಪ್ಪು ಅಂತ ಏನೂ ಮಾಡಿಲ್ಲ ನಾನು. ಸಣ್ಣಪುಟ್ಟ ತಪ್ಪುಗಳನ್ನು ಮಾಡ್ತೀವಿ. ಅದು ಎಲ್ಲರಿಂದಲೂ ನಡೆಯುತ್ತದೆ. ಅದು ತಪ್ಪು ಎಂದು ಗೊತ್ತೂ ಆಗಿರಲ್ಲ. ಬಹುಶಃ ನಾನು ಜನರು ನಿರೀಕ್ಷೆ ಮಾಡುತ್ತಿರುವ ಯಾವುದನ್ನೋ ಹೊಸದಾಗಿ ಕೊಡಲಿಲ್ವೇನೋ ಅಂತ ಅನಿಸ್ತು. ನಾವು ಇಲ್ಲದೇ ಇರುವುದನ್ನು ಮಾಡಿದ್ರೆ ಖಂಡಿತವಾಗಿ ಫೇಕ್ ಆಗಿ ಕಾಣಿಸ್ತೀವಿ. ನಾನು ಫೇಕ್ ಆಗಿ ಏನನ್ನೂ ಮಾಡಲಿಲ್ಲ. ಜನರು ನನ್ನಿಂದ ಇನ್ನೂ ಏನನ್ನೋ ನಿರೀಕ್ಷೆ ಮಾಡ್ತಿದ್ರು ಅನಿಸುತ್ತದೆ. ಅದನ್ನು ನಾನು ಕೊಡಲಿಲ್ವೇನೋ.
- ಮತ್ತೆ ಮನೆಯೊಳಗೆ ಹೋಗಲು ಅವಕಾಶ ಸಿಕ್ಕರೆ ನಿಮ್ಮಲ್ಲಿ ನೀವು ಏನನ್ನು ಬದಲಿಸಿಕೊಳ್ಳುತ್ತೀರಿ?
ನನ್ನಲ್ಲಿ ನಾನು ಏನೂ ಬದಲಾವಣೆ ಮಾಡಿಕೊಳ್ಳಲ್ಲ. ಬಹುಶಃ ಇನ್ನಷ್ಟು ಮೆಲೊಡ್ರಾಮಾ ಆ್ಯಡ್ ಮಾಡ್ಕೊಳ್ತಿದ್ದೆ ಅನಿಸುತ್ತದೆ. ಯಾಕಂದ್ರೆ ಎಷ್ಟೋ ಜನರನ್ನು ಮನೆಯೊಳಗಿದ್ದಾಗ ಅಯ್ಯೋ ಪಾಪ ಎಂದು ನೋಡುತ್ತಿದ್ದೆ. ಆದರೆ ಹೊರಗೆ ಬಂದು ನೋಡಿದಾಗ, ಅವರು ಕೊಡುವ ರಿಯಾಕ್ಷನ್ಗಳನ್ನು ನೋಡಿ, ಇವರನ್ನು ಅಯ್ಯೋ ಪಾಪ ಎಂದು ಕ್ಷಮಿಸಿದ್ದು ತಪ್ಪು ಅಂತ ನನಗನಿಸಿತು. ಸಾಮಾನ್ಯವಾಗಿ ನಾನು ಏನಾದ್ರೂ ಅನಿಸಿದ್ರೆ ನೇರವಾಗಿ ಹೇಳಿ ಅಷ್ಟಕ್ಕೆ ಬಿಟ್ಟುಬಿಡ್ತಿದ್ದೆ. ಆದರೆ ಹಾಗೆ ಬಿಡೋದನ್ನು ಕಡಿಮೆ ಮಾಡ್ತಿದ್ನೇನೋ. ಅಂದ್ರೆ ಇನ್ನೊಂಚೂರು ಡ್ರಾಮಾ ಮಾಡ್ತಿದ್ನೇನೋ.
- ಮನೆಯೊಳಗೆ ನಿಮ್ಮ ಧ್ವನಿಯ ಬಗ್ಗೆ ಸಾಕಷ್ಟು ಚರ್ಚೆ ಬಂತು..
ಮೊದಲಿನಿಂದಲೂ ನಾನು ನನ್ನ ಬೆಸ್ಟ್ ಕೊಡುತ್ತಾ ಬಂದಿದ್ದೀನಿ. ಯಾರು ಏನೇ ಅಂದುಕೊಂಡರೂ, ಎಲ್ಲರೂ ಟಾರ್ಗೆಟ್ ಮಾಡಿದಾಗಲೂ ಮನಸ್ಸಿಗೆ ತೆಗೆದುಕೊಳ್ಳದೆ ಆಡಿದ್ದೇನೆ. ಯಾಕೆಂದರೆ ಅದು ಗೇಮ್. ಆದ್ರೆ ಪ್ರತಿ ಸಲ ನನ್ನ ಧ್ವನಿಯನ್ನು ಎತ್ತಿಕೊಂಡು ಮಾತಾಡಿದಾಗಲೂ, ಅವರೇನೋ ಕಡಿಮೆ ಧ್ವನಿಯಲ್ಲಿ ಮಾತಾಡುತ್ತಾರೆ ಎನ್ನುವ ರೀತಿಯಲ್ಲಿ ನಮ್ರತಾ, ವಿನಯ್ ಅದನ್ನು ಹೆಚ್ಚು ಮಾತಾಡಿದ್ದಾರೆ- ಪ್ರತಿ ನಾಮಿನೇಷನ್‌ನಲ್ಲಿಯೂ ಈ ಕಾರಣ ಕೊಟ್ಟಿದ್ದಾರೆ. ನಾನು ಯಾವ ಜಾಗದಲ್ಲಿ ಮಾತಾಡಬೇಕೋ ಆ ಜಾಗದಲ್ಲಿ ಮಾತಾಡಿದ್ದೇನೆ. ನಾರ್ಮಲ್ ಆಗಿ ಮಾತಾಡುವಾಗ ನನ್ನ ಧ್ವನಿಯಲ್ಲಿ ಮಾತಾಡುವಾಗ ಎದುರಿಗಿರುವವರಿಗೆ ಕಂಫರ್ಟಬಲ್ ಇರುವ ಧ್ವನಿಯಲ್ಲಿಯೇ ಮಾತಾಡುತ್ತಿರುತ್ತೇನೆ.
- ಕಾಲು ನೋವಾಗಿದ್ದು ನಿಮಗೆ ಹಿನ್ನೆಡೆ ತಂದಿದೆ?
ಕಾಲು ನೋವಾಗಿದ್ದ ದಿನ ನನಗೆ, ಶಾಕ್ ಆಗಿತ್ತು. ನನಗೆ ಯಾರೋ ಚಾಕು ಚುಚ್ಚಿಬಿಟ್ರೇನೋ ಅನ್ನುವಷ್ಟು ನೊಂದುಕೊಂಡಿದ್ದೆ. ಇಷ್ಟು ಚೆನ್ನಾಗಿ ಆಡ್ತಿದ್ನಲ್ವಾ? ಯಾಕೆ ಹೀಗೆ ಕಷ್ಟ ಕೊಟ್ಟೆ ಎಂದು ದೇವರನ್ನೆಲ್ಲಾ ಬೈದುಕೊಂಡಿದ್ದೇನೆ. ಕಾಲು ನೋವು ಮಾಡಿ ಮನೆಯೊಳಗೆ ಹೋಗದೇ ಇರುವ ಹಾಗೆ ಮಾಡಿಬಿಟ್ಯಲ್ಲಾ ಎಂದು ದೂರಿದ್ದೇನೆ. ಆ ವಿಷಯದಲ್ಲಿ ನಾನು ಬಿಗ್‌ಬಾಸ್ ಟೀಮ್‌ಗೆ ಥ್ಯಾಂಕ್‌ಫುಲ್ ಆಗಿದ್ದೇನೆ. ಬಹಳಷ್ಟು ಟಾಸ್ಕ್‌ಗಳು ಕಾಲು ನೋವಾಗಿದ್ದರೂ ಆಡಬಹುದು ಎನ್ನುವ ರೀತಿಯಲ್ಲಿಯೇ ಇರುತ್ತಿದ್ದವು. ಕಾಲು ನೋವು ನನ್ನನ್ನು ಯಾವುದೋ ನಾಲ್ಕು ಫಿಜಿಕಲ್ ಟಾಸ್ಕ್‌ನಿಂದ ಹೊರಗಿಟ್ಟಿರಬಹುದು ಬಿಟ್ರೆ, ಉಳಿದದ್ದನ್ನು ನಾನು ಆಡಲು ಸಮರ್ಥಳಾಗಿದ್ದೆ. ಚಾನ್ಸ್ ಸಿಗಬೇಕಿತ್ತಷ್ಟೆ. ಅಲ್ಲದೇ ಟಾಸ್ಕ್ ಅಂತ ಬಂದಾಗ ಅದು ಬರೀ 30 ಶೇಕಡಾ ಅಷ್ಟೇ ಇರುತ್ತದೆ. ಅದಕ್ಕಿಂತ ಪರ್ಸನಾಲಿಟಿ ಮುಖ್ಯ ಎಂದು ಸುದೀಪ್ ಅವರು ಮೊದಲೇ ಕ್ಲಿಯರ್ ಆಗಿ ಹೇಳಿದ್ದರು.
- ನೀವು, ಸಂಗೀತಾ, ಕಾರ್ತಿಕ್ ಟ್ರಯೋ ಫ್ರೆಂಡ್‌ಷಿಪ್ ಬಗ್ಗೆ..?