ನವದೆಹಲಿ: ಪ್ರಾಯೋಗಿಕ ಪ್ರಯತ್ನದಲ್ಲಿ ಬಾಹ್ಯಾಕಾಶ ಡಾಕಿಂಗ್ ಪ್ರಯೋಗಗಳ ನಿರ್ವಹಣೆಗೆ ಉಡಾವಣೆ ಮಾಡಲಾದ ಎರಡು ಉಪಗ್ರಹಗಳನ್ನು ಮೂರು ಮೀಟರ್ ಅಂತರದಷ್ಟು ಸಮೀಪಕ್ಕೆ ತಂದು ಬಳಿಕ ಮತ್ತೆ ಸುರಕ್ಷಿತವಾಗಿ ಮೊದಲಿನ ಸ್ಥಾನಕ್ಕೆ ಸೇರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಹೆಚ್ಚಿನ ಡಾಟಾ ವಿಶ್ಲೇಷಣೆಯ ಬಳಿಕ ಡಾಕಿಂಗ್ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದೆ.
''ಉಪಗ್ರಹಗಳನ್ನು 15 ಮೀ ದೂರ ಹಾಗೂ 3 ಮೀ ಅಂತರದ ಸಮೀಪಕ್ಕೆ ಕರೆತರುವ ಪ್ರಾಯೋಗಿಕ ಪ್ರಯತ್ನ ನಡೆಸಲಾಗಿದೆ. ಬಳಿಕ ಬಾಹ್ಯಾಕಾಶ ನೌಕೆಗಳನ್ನು ಸುರಕ್ಷಿತ ಅಂತರದಲ್ಲಿ ಮತ್ತೆ ಹಿಂದಕ್ಕೆ ಸರಿಸಲಾಗಿದೆ. ಈ ಪ್ರಕ್ರಿಯೆಯನ್ನು ಮತ್ತಷ್ಟು ವಿಶ್ಲೇಷಿಸಿದ ಬಳಿಕ ಡಾಕಿಂಗ್ ಕೈಗೊಳ್ಳಲಾಗುವುದು. ಮುಂದಿನ ಅಪ್ಡೇಟ್ಗಾಗಿ ಕಾಯಿರಿ'' ಎಂದು ಇಸ್ರೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
SpaDeX Docking Update:
— ISRO (@isro) January 12, 2025
SpaDeX satellites holding position at 15m, capturing stunning photos and videos of each other! 🛰️🛰️
#SPADEX #ISRO pic.twitter.com/RICiEVP6qB
ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಡಾಕಿಂಗ್ ಪ್ರದರ್ಶಿಸುವ ಗುರಿ ಹೊಂದಿರುವ ಸ್ಪಾಡೆಕ್ಸ್ ಮಿಷನ್ ಡಿಸೆಂಬರ್ 30ರಂದು ಉಡಾವಣೆಗೊಂಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 220 ಕಿಲೋಗ್ರಾಂಗಳ ಎರಡು ಉಪಗ್ರಹಗಳನ್ನು ಹೊತ್ತ PSLV C60 ರಾಕೆಟ್ ಅನ್ನು 475 ಕಿಲೋಮೀಟರ್ ವೃತ್ತಾಕಾರದ ಕಕ್ಷೆಗೆ ಸೇರಿಸಲಾಗಿತ್ತು.
ಒಂದೇ ತರನಾದ ಮಿಷನ್ಗಳ ಗುರಿ ಸಾಧನೆಗೆ ಬಹು ರಾಕೆಟ್ಗಳನ್ನು ಉಡಾವಣೆ ಮಾಡಿರುವಾಗ ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನ ಅತ್ಯಗತ್ಯವಾಗಿರುತ್ತದೆ. ಈ ಮಿಷನ್ ಮೂಲಕ ಭಾರತವು ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗುವತ್ತ ಸಾಗುತ್ತಿದೆ.
SpaDeX Docking Update:
— ISRO (@isro) January 12, 2025
A trial attempt to reach up to 15 m and further to 3 m is done.
Moving back spacecrafts to safe distance
The docking process will be done after analysing data further.
Stay tuned for updates.#SpaDeX #ISRO
ಸ್ಪಾಡೆಕ್ಸ್ ಮಿಷನ್‌ನ ಪ್ರಾಥಮಿಕ ಉದ್ದೇಶವು ಕಡಿಮೆ ಅಂತರದ ಭೂಮಿಯ ವೃತ್ತಾಕಾರದ ಕಕ್ಷೆಯಲ್ಲಿ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳ (SDX01 - ಚೇಸರ್ ಮತ್ತು SDX02 - ಟಾರ್ಗೆಟ್) ಸಂಧಿಸುವಿಕೆ, ಡಾಕಿಂಗ್ ಮತ್ತು ಅನ್‌ಡಾಕಿಂಗ್‌ಗೆ ಅಗತ್ಯವಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರದರ್ಶನ ತೋರುವುದಾಗಿದೆ.
ಡಾಕ್ ಮಾಡಿದ ಬಾಹ್ಯಾಕಾಶ ನೌಕೆಯ ನಡುವೆ ವಿದ್ಯುತ್ ಶಕ್ತಿಯ ವರ್ಗಾವಣೆಯಾಗುತ್ತದೆಯೇ ಎಂಬುದನ್ನು ಕಂಡುಕೊಳ್ಳುವ ಉದ್ದೇಶವನ್ನೂ ಇದು ಹೊಂದಿದೆ. ಬಾಹ್ಯಾಕಾಶದಲ್ಲಿ ರೋಬೋಟಿಕ್ಸ್, ಸಂಯೋಜಿತ ಬಾಹ್ಯಾಕಾಶ ನೌಕೆ ನಿಯಂತ್ರಣ ಮತ್ತು ಅನ್‌ಡಾಕ್ ಮಾಡಿದ ನಂತರ ಪೇಲೋಡ್ ಕಾರ್ಯಾಚರಣೆಗಳಂತಹ ಭವಿಷ್ಯದ ಯೋಜನೆಗಳಿಗೆ ಇದು ಅಗತ್ಯವಾಗಿದೆ.
ಏನಿದು ಸ್ಪಾಡೆಕ್ಸ್ ಮಿಷನ್?: ಎರಡು ಸಣ್ಣ ಉಪಗ್ರಹಗಳನ್ನು ಬಳಸಿಕೊಂಡು ಬಾಹ್ಯಾಕಾಶ ನೌಕೆಗಳನ್ನು ಸಂಧಿಸಲು, ಡಾಕಿಂಗ್ ಮತ್ತು ಅನ್‌ಡಾಕ್ ಮಾಡಲು ಅಗತ್ಯವಾದ ತಂತ್ರಜ್ಞಾನವನ್ನು ಅಭಿವೃದ್ಧಿ ಮತ್ತು ಪ್ರದರ್ಶಿಸಲು ವಿನ್ಯಾಸಗೊಳಿಸಲಾದ ಸ್ಪಾಡೆಕ್ಸ್ ಒಂದು ಐತಿಹಾಸಿಕ ಯೋಜನೆಯಾಗಿದೆ.
ಇದನ್ನೂ ಓದಿ : ಸ್ಪಡೆಕ್ಸ್ ಮಿಷನ್: ಮತ್ತೆ ಡಾಕಿಂಗ್ ಪ್ರಯೋಗ ಮುಂದೂಡಿದ ಇಸ್ರೋ - ISRO SPADEX MISSION