ನರ್ತನ್ ನಿರ್ದೇಶನದ ಬಹುನಿರೀಕ್ಷಿತ 'ಭೈರತಿ ರಣಗಲ್' ಇಂದು, ನವೆಂಬರ್ 15ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ ಚಿತ್ರಕ್ಕೆ ಆರಂಭಿಕವಾಗಿ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ಗೀತಾ ಪಿಕ್ಚರ್ಸ್ ನಿರ್ಮಾಣದ ಸಿನಿಮಾಗೆ ಅದ್ಧೂರಿ ಸ್ವಾಗತ ದೊರಕಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಸೆಲೆಬ್ರೇಷನ್ ವಿಡಿಯೋಗಳು ಸಖತ್ ಸದ್ದು ಮಾಡಿವೆ.
350ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ 'ಭೈರತಿ ರಣಗಲ್' ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಚಂದನವನದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್, ನಾಗಭೂಷಣ್, ವಿಕ್ಕಿ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಡಾಲಿ ಭರ್ಜರಿ ಡ್ಯಾನ್ಸ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೆ.ಜಿ.ರಸ್ತೆಯಲ್ಲಿರುವ ನರ್ತಕಿ ಥಿಯೇಟರ್ನಲ್ಲಿ ಮಾರ್ನಿಂಗ್ ಸ್ಪೆಷಲ್ ಶೋ ಹಮ್ಮಿಕೊಳ್ಳಲಾಗಿತ್ತು. ಈ ವಿಶೇಷ ಪ್ರದರ್ಶನಕ್ಕೆ ನಿರ್ಮಾಪಕಿ ಮತ್ತು ಶಿವರಾಜ್ಕುಮಾರ್ ಪತ್ನಿ ಗೀತಾ ಮತ್ತು ಪುತ್ರಿ ನಿವೇದಿತಾ ಹಾಜರಾಗಿದ್ದರು. ರಿಲೀಸ್ ಆಗಿರುವ ಥಿಯೇಟರ್ಗಳಲ್ಲಿ ಭೈರತಿ ರಣಗಲ್ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಕಲೆಕ್ಷನ್ ಎಷ್ಟಾಗಬಹುದು?: ಸಿನಿಮಾದ ಮೊದಲ ದಿನದ ಕಲೆಕ್ಷನ್ ಮೇಲೆ ಹೆಚ್ಚಿನವರ ಗಮನ ಇರುತ್ತದೆ. ಅದರಂತೆ ಇಂದು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಭೈರತಿ ರಣಗಲ್ ತನ್ನ ಮೊದಲ ದಿನ ಎಷ್ಟು ಗಳಿಸಬಹುದು ಎಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಒದಗಿಸಿರುವ ಮಾಹಿತಿ ಪ್ರಕಾರ, ಭೈರತಿ ರಣಗಲ್ 0.37 ಕೋಟಿ ರೂಪಾಯಿ ಗಳಿಸಲಿದೆ. ಈ ಅಂಕಿಅಂಶ ಏರುವ ಸಾಧ್ಯತೆಗಳಿವೆ. ಅದಾಗ್ಯೂ, ಮೊದಲ ದಿನದ ಗಳಿಕೆ ಮಾಹಿತಿ ತಿಳಿಯಲು ಚಿತ್ರತಂಡದ ಅಧಿಕೃತ ಘೋಷಣೆಗೆ ಕಾಯಬೇಕಿದೆ.