ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಭೈರತಿ ರಣಗಲ್'. ನರ್ತನ್ ನಿರ್ದೇಶನದಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರ ಒಂದಿಲ್ಲೊಂದು ವಿಚಾರವಾಗಿ ಸಖತ್ ಸುದ್ದಿಯಲ್ಲಿದೆ. ಇದೀಗ ಟೀಸರ್ ಬಿಡುಗಡೆಯ ಸಿದ್ಧತೆಯಲ್ಲಿದೆ ಚಿತ್ರತಂಡ. ಹೌದು, ಶಿವಣ್ಣನ ಬರ್ತ್‌ಡೇಗೆ 'ಭೈರತಿ ರಣಗಲ್' ಟೀಸರ್ ಬಿಡುಗಡೆ ಆಗಲಿದೆ. ಈ ಟೀಸರ್ ಅನ್ನು 'First Verdict' ಎಂದು ಚಿತ್ರತಂಡ ಬಣ್ಣಿಸಿದೆ.
ಇದೇ ಶುಕ್ರವಾರ, ಜುಲೈ 12ರಂದು ಶಿವಣ್ಣ ತಮ್ಮ 62ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ತಮ್ಮ ಮೆಚ್ಚಿನ ನಟನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಸಂಭ್ರಮಿಸಲಿರುವ ಫ್ಯಾನ್ಸ್, ಮುಂದಿನ ಸಿನಿಮಾಗಳ ಅಪ್ಡೇಟ್ಸ್ ನಿರೀಕ್ಷಿಸಿದ್ದಾರೆ.
ಅಂದಹಾಗೆ, 'ಭೈರತಿ ರಣಗಲ್', 'ಮಫ್ತಿ' ಸಿನಿಮಾದ ಪ್ರೀಕ್ವೆಲ್ ಆಗಿದ್ದು, ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷ ತೆರೆ ಕಾಣುತ್ತಿರುವ ಕನ್ನಡದ ಬಿಗ್ ಪ್ರಾಜೆಕ್ಟ್ ಇದು. ಇದೀಗ ಚಿತ್ರದ ಜೊತೆ ಕೈ ಜೋಡಿಸಿರುವುದು ನಮಗೂ ಖುಷಿ ತಂದಿದೆ. ಪ್ರಚಾರ ಕೆಲಸವೂ ದೊಡ್ಡ ಮಟ್ಟದಲ್ಲಿಯೇ ಸಾಗಲಿದೆ ಎಂದಿದ್ದಾರೆ ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ.