ಬೆಂಗಳೂರು: ಈ ಬಾರಿಯ ಬಹುನಿರೀಕ್ಷಿತ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 29ರಿಂದ ಮಾರ್ಚ್ 7ರವರೆಗೆ ನಡೆಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ 2024ರ ಫೆಬ್ರವರಿ 29 ರಂದು ವಿಧಾನಸೌಧದ ಮುಂಭಾಗ ನಡೆಯಲಿದ್ದು, ಮಾರ್ಚ್ 7ರಂದು ಸಮಾರೋಪ ಸಮಾರಂಭ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ.
ಚಲನಚಿತ್ರೋತ್ಸವವು ಈ ಬಾರಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವುದು ವಿಶೇಷ. ಚಲನಚಿತ್ರ ಸಂಘಟನೆಗಳ ಅಂತಾರಾಷ್ಟ್ರೀಯ ಮಹಾ ಒಕ್ಕೂಟ (FIAPF) ಮಾನ್ಯತೆ ಪಡೆದ ಈ ಚಲನಚಿತ್ರೋತ್ಸವ, ರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ಚಲನಚಿತ್ರ ನಿರ್ಮಾಪಕರು, ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಮತ್ತಿತರ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಮಾರೋಪ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಿಯಾನ್ ಮಾಲ್ನ ಪಿವಿಆರ್ ಸಿನಿಮಾದ 11 ಪರದೆಗಳು, ಚಾಮರಾಜಪೇಟೆಯಲ್ಲಿರುವ ರಾಜ್ಕುಮಾರ್ ಕಲಾ ಭವನ, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಚಿತ್ರಸಮಾಜದಲ್ಲಿ ಪ್ರತಿನಿಧಿಗಳಿಗೆ ಮಾರ್ಚ್ 1 ರಿಂದ ಚಲನಚಿತ್ರ ಪ್ರದರ್ಶನ ಆರಂಭವಾಗಲಿದೆ. ಸುಮಾರು 50ಕ್ಕೂ ಹೆಚ್ಚು ದೇಶಗಳಿಂದ 200ಕ್ಕೂ ಹೆಚ್ಚು ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಚಲನಚಿತ್ರೋತ್ಸವದ ಪ್ರಮುಖ ಹೈಲೆಟ್ಸ್: ಇದರಲ್ಲಿ ಮೂರು ವಿಭಾಗಗಳು ಇವೆ. ಏಷ್ಯಾ ಸಿನಿಮಾ ವಿಭಾಗ, ಭಾರತೀಯ ಸಿನಿಮಾಗಳ ವಿಭಾಗ ಹಾಗೂ ಕನ್ನಡ ಸಿನಿಮಾ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಉಳಿದಂತೆ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಮನರಂಜನಾ ಸಿನಿಮಾಗಳು, ವಿಮರ್ಶಕರ ವಾರ (ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟದ ಆಯ್ಕೆಯ ಸಿನಿಮಾಗಳು), ಬಯೋಪಿಕ್‌ಗಳು, ದೇಶ ಕೇಂದ್ರಿತ ಸಿನಿಮಾ, ದೇಶದಲ್ಲಿ ಹೆಚ್ಚು ಪರಿಚಿತವಲ್ಲದ ಉಪ ಭಾಷೆಗಳಲ್ಲಿ ತಯಾರಾದ ಚಿತ್ರ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ. ಪುನರಾವಲೋಕನ ವಿಭಾಗದಲ್ಲಿ ಮೃಣಾಲ್ ಸೇನ್ ಅವರ ಚಿತ್ರಗಳು ಪ್ರದರ್ಶನ ಆಗಲಿದೆ. ಶತಮಾನೋತ್ಸವ ನೆನಪು ಹಾಗೂ ಶ್ರದ್ಧಾಂಜಲಿ ವಿಭಾಗದಲ್ಲಿ ಸಂಗೀತ ನಿರ್ದೇಶಕ ವಿಜಯ್ ಭಾಸ್ಕರ್, ನಟ ಸಾಬು ದಸ್ತಗೀರ್ (ಹಾಲಿವುಡ್‌ನಲ್ಲಿ ಖ್ಯಾತಿ ಪಡೆದ ಮೈಸೂರು ಮೂಲದ ನಟ), ನಿರ್ದೇಶಕ ಭಗವಾನ್, ನಟಿ ಲೀಲಾವತಿ, ನಿರ್ಮಾಪಕ ಸಿ.ವಿ.ಶಿವಶಂಕ, ಗಾಯಕಿ ವಾಣಿ ಜಯರಾಂ ಮುಂತಾದವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಆಗಲಿದೆ. ಅಲ್ಲದೇ ‘ಕನ್ನಡ ಸಿನಿಮಾ 90’, ‘ಕರ್ನಾಟಕ 50’ ವಿಭಾಗದಲ್ಲಿ ಆಯ್ದ ಚಿತ್ರಗಳ ಪ್ರದರ್ಶನ ನಡೆಯಲಿದೆ. ಮಾನವ ಹಕ್ಕು ಮತ್ತು ಮೌಲ್ಯಗಳನ್ನು ಪ್ರತಿಪಾದಿಸುವ ಸಾಕ್ಷ್ಯಚಿತ್ರಗಳ ವಿಭಾಗ ಕೂಡ ಇದೆ. ಈ ಮುನ್ನ ವಿಶ್ವದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಚಿತ್ರಗಳು ‘ಸಮಕಾಲೀನ ವಿಶ್ವ ಸಿನಿಮಾ’ ವಿಭಾಗದಲ್ಲಿಯೂ ಪ್ರದರ್ಶನವಾಗಲಿವೆ. www.biffes.org ಮೂಲಕ ಸಿನಿಮಾಗಳ ವಿವರ ನೋಡಬಹುದು.
ಆಹ್ವಾನಿತ ಪ್ರತಿನಿಧಿಗಳಲ್ಲಿ ಚಿತ್ರ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಪತ್ರಕರ್ತರು, ವಿಮರ್ಶಕರು, ಚಿತ್ರೋತ್ಸವದ ಸಂಘಟಕರು, ಸಿನಿಮಾ ಶಿಕ್ಷಣ ತಜ್ಞರು ಸೇರಿದ್ದಾರೆ. ವಿದೇಶಿ ರಾಯಭಾರಿ ಕಚೇರಿಗಳ ಅಧಿಕಾರಿ ವರ್ಗ, ವಿದೇಶಿ ಸಾಂಸ್ಕೃತಿ ಸಂಘಟನೆಗಳ ಪ್ರತಿನಿಧಿಗಳನ್ನು ಬಹುಸಂಖ್ಯೆಯಲ್ಲಿ ನಿರೀಕ್ಷಿಸಬಹುದಾಗಿದೆ. ಚಲನಚಿತ್ರ ಮಾಧ್ಯಮ ಮತ್ತು ಉದ್ಯಮಕ್ಕೆ ಸಂಬಂಧಪಟ್ಟ ತಜ್ಞರಿಂದ ಕಾರ್ಯಾಗಾರ, ಸಂವಾದ ಮತ್ತು ಉಪನ್ಯಾಸಗಳು ನಡೆಯಲಿವೆ. ಈ ವರ್ಷದ ನಿಯೋಜಿತವಾದ ಕಾರ್ಯಕ್ರಮಗಳು ಕೆಳಕಂಡಂತಿವೆ.
1. ಸಿನಿಮಾ ಸಂಕಲನ ಕಲೆಯ ಕುರಿತಂತೆ ಕಾರ್ಯಾಗಾರ.
2. ಹೆಸರಾಂತ ನಿರ್ದೇಶಕ/ನಿರ್ದೇಶಕ/ ತಂತ್ರಜ್ಞ/ಸಿನಿ ತಜ್ಞರಿಂದ ಕನ್ನಡ ಸಿನಿಮಾ '90', ಕರ್ನಾಟಕ 50 ಕುರಿತಂತೆ ಚರ್ಚೆ ಮತ್ತು ಸಂವಾದ.
3. ಚಿತ್ರಕಥಾ ರಚನೆಯ ಕಾರ್ಯಾಗಾರ.
4. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿಕೆ ಮೂರ್ತಿ ಸ್ಮಾರಕ ವಿಶೇಷ ಉಪನ್ಯಾಸ.
5. ಸಿನಿಮಾದಲ್ಲಿ ಕೃತಕ ಬುದ್ಧಿ ಮತ್ತೆಯ ಬಳಕೆ.