ಕನ್ನಡ ಚಿತ್ರರಂಗದ ಅತ್ಯಂತ ಬಹುಬೇಡಿಕೆ ತಾರೆಗಳ ಪೈಕಿ ಗುರುತಿಸಿಕೊಂಡಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಅಭಿನಯದ ಬಘೀರ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಕನ್ನಡಿಗರಿಂದ ಹೆಚ್ಚಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರಮಂದಿರಗಳಲ್ಲಿ 'ಬಘೀರ' ಪ್ರದರ್ಶನ ಮುಂದುವರಿಸಿದೆ. ಗಳಿಕೆ ಸಹ ಉತ್ತಮವಾಗಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಡಾ. ಸೂರಿ ನಿರ್ದೇಶನದ 'ಬಘೀರ' ನಾಲ್ಕು ದಿನಗಳಲ್ಲಿ 13.03 ಕೋಟಿ ರೂ. ಗಳಿಸುವಲ್ಲಿ (ನೆಟ್ ಕಲೆಕ್ಷನ್) ಯಶಸ್ವಿ ಆಗಿದೆ. ತೆರೆ ಕಂಡ ದಿನ 2.8 ಕೋಟಿ ರೂ. ಗಳಿಸಿತ್ತು. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಮತ್ತು ಆಪ್ತ ಮೂಲಗಳು ಕೊಟ್ಟ ಅಂಕಿ ಅಂಶದಲ್ಲಿ ಕೊಂಚ ಹೆಚ್ಚು ಕಡಿಮೆ ಇದೆ. ಸಿನಿಮಾ ಚಿತ್ರಮಂದಿರ ಪ್ರವೇಶಿಸಿದ ಮೊದಲ ದಿನ ಸುಮಾರು 5 ರಿಂದ 6 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಫಿಲ್ಮ್ ಸಂಸ್ಥೆಯ ಆಪ್ತರೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದರು. ಎಲ್ಲದಕ್ಕೂ ಚಿತ್ರದ ಹಿಂದಿರುವ ಭಾರತೀಯ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯನ್ನು ಗಮನಿಸೋದಾದ್ರೆ, ಬಹುನಿರೀಕ್ಷೆಗಳೊಂದಿಗೆ ಬಂದ ಈ ಸೂಪರ್ ಹೀರೋ ಕಾನ್ಸೆಪ್ಟ್ನ ಸಿನಿಮಾ ಕನ್ನಡದಲ್ಲಿ ಮೊದಲ ದಿನ 2.55 ಕೋಟಿ ರೂಪಾಯಿ, ಎರಡನೇ ದಿನ 2.9 ಕೋಟಿ ರೂಪಾಯಿ, ಮೂರನೇ ದಿನ 3.2 ಕೋಟಿ ರೂಪಾಯಿ, ನಾಲ್ಕನೇ ದಿನ 2.96 ಕೋಟಿ ರೂಪಾಯಿ ಗಳಿಸಿದ್ದು, ಈವರೆಗೆ 11.61 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆಲುಗಿನಲ್ಲೂ ಬಿಡುಗಡೆ ಆಗಿದ್ದು, ಮೊದಲ ದಿನ 0.5 ಕೋಟಿ ರೂಪಾಯಿ, ಎರಡನೇ ದಿನ 0.4 ಕೋಟಿ ರೂ., ಮೂರನೇ ದಿನ 0.3 ಕೋಟಿ ರೂ., ನಾಲ್ಕನೇ ದಿನ 0.22 ಕೋಟಿ ರೂ. ಮೂಲಕ ಒಟ್ಟು 1.42 ಕೋಟಿ ರೂಪಾಯಿ ಗಳಿಸಿದೆ.