ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ಬಂದ ಬಾಹುಬಲಿ ಸರಣಿ ಚಿತ್ರಗಳು ವಿಶ್ವದಾದ್ಯಂತ ಸದ್ದು ಮಾಡಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರುಗಳಿಗೆ ಹೆಚ್ಚಿನ ಅವಕಾಶಗಳು ಲಭಿಸಿದವು. ಕಥೆಯಲ್ಲಿ ಬಾಹುಬಲಿಯಾಗಿ ಪ್ರಭಾಸ್ ಮತ್ತು ಬಲ್ಲಾಳ ದೇವನಾಗಿ ರಾಣಾ ದಗ್ಗುಭಾಟಿ ಅಭಿನಯಿಸಿದ್ದರು. ಇಬ್ಬರ ಜೀವನದ ಅನೇಕ ತಿಳಿಯದ ತಿರುವುಗಳು, ಮಾಹಿತಿಗಳನ್ನು ಚಿತ್ರದಲ್ಲಿ ತೋರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಈಗ ಎಲ್ಲವನ್ನೂ ಹೊಸ ಅಧ್ಯಾಯದೊಂದಿಗೆ ಅನಿಮೇಟೆಡ್ ಫಾರ್ಮೆಟ್‌ದಲ್ಲಿ ಹೇಳಲು ಯೋಜನೆ ಸಿದ್ಧಗೊಂಡಿದೆ.
ತೆಲುಗು ಭಾಷೆಯ ಮಹಾಕಾವ್ಯ ಫ್ಯಾಂಟಸಿ ಆ್ಯಕ್ಷನ್ ಚಿತ್ರವಾಗಿದ್ದು, ಡಾರ್ಲಿಂಗ್ ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಸತ್ಯರಾಜ್ ಮತ್ತು ನಾಸರ್ ಸೇರಿದಂತೆ ದೊಡ್ಡ ತಾರಬಳಗ ಭಾಗ 1 ಮತ್ತು 2ರಲ್ಲಿತ್ತು.
ಬಾಹುಬಲಿ ಪಾರ್ಟ್ 1ನಲ್ಲಿ ಪ್ರೀತಿಯ ಆವಂತಿಕಾಗೆ ಸಹಾಯ ಮಾಡುವ ಸಾಹಸಿ ಯುವಕನ ಕಥೆಯಿದೆ. ಮಾಹಿಷ್ಮತಿಯ ಮಾಜಿ ರಾಣಿ ದೇವಸೇನಾ, ರಾಜ ಭಲ್ಲಾಲದೇವನ ದಬ್ಬಾಳಿಕೆಯ ಆಳ್ವಿಕೆ ಮೊದಲ ಭಾಗದಲ್ಲಿದೆ. ಬಾಹುಬಲಿ 2ರಲ್ಲಿ ಕಥೆ ಮುಕ್ತಾಯವಾಗುತ್ತದೆ .
ಚಿತ್ರದ ಕಥೆಯನ್ನು ರಾಜಮೌಳಿ ಅವರ ತಂದೆ ವಿ.ವಿಜಯೇಂದ್ರ ಪ್ರಸಾದ್ ಬರೆದಿದ್ದರು. ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಎಂ.ಎಂ.ಕೀರವಾಣಿ ಸಂಯೋಜಿಸಿದ್ದಾರೆ. ಛಾಯಾಗ್ರಹಣ, ನಿರ್ಮಾಣ ವಿನ್ಯಾಸ ಮತ್ತು ವಿಎಫ್‌ಎಕ್ಸ್ ಅನ್ನು ಕ್ರಮವಾಗಿ ಕೆ.ಕೆ.ಸೆಂಥಿಲ್ ಕುಮಾರ್, ಸಾಬು ಸಿರಿಲ್ ಮತ್ತು ವಿ.ಶ್ರೀನಿವಾಸ್ ಮೋಹನ್ ನಿರ್ವಹಿಸಿದ್ದಾರೆ.