ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಪುಷ್ಪ: ದಿ ರೂಲ್' ಬಿಡುಗಡೆಯ ಹೊಸ್ತಿಲಿನಲ್ಲಿದೆ. ಸುಕುಮಾರ್ ನಿರ್ದೇಶನದ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರತಂಡ ಟ್ರೇಲರ್ ಅನಾವರಣಗೊಳಿಸುವ ಮೂಲಕ ಪ್ರಚಾರ ಪ್ರಾರಂಭಿಸಿದೆ.
ಈ ಟ್ರೇಲರ್‌ನಲ್ಲಿ ಕಂಡ ವಿಶಿಷ್ಟ ಪಾತ್ರವೊಂದು ದೇಶಾದ್ಯಂತ ಸಿನಿಪ್ರಿಯರ ಗಮನ ಸೆಳೆದಿದೆ. 2 ನಿಮಿಷ ̇48 ಸೆಕೆಂಡ್ಗಳುಳ್ಳ ಟ್ರೇಲರ್ನ ಜಾತ್ರೆಯಲ್ಲಿ ಬರುವ ಅರ್ಧ ತಲೆ ಬೋಳಿಸಿದ (ಹಾಫ್ ಬಾಲ್ಡ್) ಕ್ಯಾರೆಕ್ಟರ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅವರು ಬೇರೆ ಯಾರೂ ಅಲ್ಲ, ನಮ್ಮ ಕನ್ನಡದ ಪ್ರತಿಭೆ ತಾರಕ್ ಪೊನ್ನಪ್ಪ.
ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು ನಂತರ ಕನ್ನಡ ದೇಶದೋಳ್, ಗಿಲ್ಕಿ, ಅಮೃತಾ ಅಪಾರ್ಟ್ಮೆಂಟ್ ಎಂಬಂತಹ ಸಿನಿಮಾಗಳನ್ನು ಮಾಡಿದ್ದಾರೆ. ಬ್ಲಾಕ್ಬಸ್ಟರ್ ಹಿಟ್ 'ಕೆಜಿಎಫ್' ಸಿನಿಮಾದಲ್ಲಿ ಅಭಿನಯಿಸುವ ಮೂಲಕವೂ ಗಮನ ಸೆಳೆದಿರುವ ತಾರಕ್ ಪೊನ್ನಪ್ಪ ಅವರೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಹೌದು, ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತದೊಂದಿಗೆ ತಾರಕ್ ಪೊನ್ನಪ್ಪ ಮಾತನಾಡಿದರು.
''ಪುಷ್ಪ 2 ಸಿನಿಮಾದ ಭಾಗವಾಗಿರೋದು ತುಂಬಾನೇ ಖುಷಿ ಕೊಟ್ಟಿದೆ. ನಾವು ಶೂಟಿಂಗ್ ಶುರು ಮಾಡಿದ್ದು ಜನವರಿ 7ರಂದು. ಅದು ಜಾತ್ರೆಯ ಸೀಕ್ವೆನ್ಸ್. ಅರ್ಧ ಗುಂಡು ಮಾಡಿರೋ ಸಿಕ್ವೇನ್ಸ್ ಅನ್ನು ನೀವು ನೋಡಬಹುದು. ಬಳಿಕ ಕ್ಲೈಮ್ಯಾಕ್ಸ್ ಸೀನ್ ಶೂಟ್ ಮಾಡಿದ್ವಿ. ಹಾಗೆಯೇ ಒಂದು ಮನೆಯಲ್ಲಿ ಚಿತ್ರೀಕರಣ ನಡೆಸಿದೆವು. ಬಹುತೇಕ 50ಕ್ಕೂ ದಿನಗಳ ಶೂಟಿಂಗ್ ನಡೆಸಿದ್ದೇವೆ'' -ನಟ ತಾರಕ್ ಪೊನ್ನಪ್ಪ.
ಸುಕುಮಾರ್ ಸರ್ ಬಹಳ ಕ್ರಿಯೇಟಿವ್ ಪರ್ಸನ್: ''ಸುಕುಮಾರ್ ಸರ್ ಬಗ್ಗೆ ಹೇಳಬೇಕಂದ್ರೆ ಅವರ ಜೊತೆ ಕೆಲಸ ಮಾಡಿದ್ದು ಬಹಳಾನೇ ಖುಷಿಯಾಯಿತು. ಅವರು ಬಹಳ ಕ್ರಿಯೇಟಿವ್ ಪರ್ಸನ್. ಇನ್ನೂ ಚೆನ್ನಾಗಿ ಮಾಡಬಹುದು ಅಂತಾ ಆಲೋಚನೆ ಮಾಡುತ್ತಿರುತ್ತಾರೆ. ಆ ದೃಷ್ಟಿಯಲ್ಲೇ ಪುಷ್ಪ ಸಿನಿಮಾ ಮಾಡಿಕೊಂಡು ಬಂದಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ. ನಾನು ಬೇರೆಯವರನ್ನು ನೋಡಿ ಕಲಿತುಕೊಳ್ಳುತ್ತಿದ್ದೆ. ನಮ್ಮ ಕನ್ನಡದವರು ಯಾವುದೇ ಭಾಷೆ ಆದ್ರೂ ವಿಷ್ಯವನ್ನು ಕಲಿತುಕೊಳ್ಳುತ್ತಾರ. ಅದಕ್ಕೆ ಅವರು ನೀವು ಕನ್ನಡದವರು ಬಹಳ ಸೂಪರ್ ಅಂತಾ ಹೇಳಿದ್ರು. ಇದು ಬಹಳ ಖುಷಿ ಕೊಟ್ಟಿತು'' ಎಂದು ತಿಳಿಸಿದರು.
''ನಾಯಕ ನಟ ಅಲ್ಲು ಅರ್ಜುನ್ ಸರ್ ಜೊತೆ ಕೆಲಸ ಮಾಡಿದ್ದು ಬಹಳ ಚೆನ್ನಾಗಿತ್ತು. ಅವರು ಡೆಡಿಕೇಟೆಡ್ ಆ್ಯಕ್ಟರ್. ಅವರ ಜೊತೆ ಒಂದು ಫೈಟ್ ಸೀಕ್ವೆನ್ಸ್ ಇತ್ತು. ಅವರು ಆ ಫೈಟ್ಗೆ ಸಾಕಷ್ಟು ಎಫರ್ಟ್ ಹಾಕಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್ ಆದ್ರೂ ಅವರ ಡೆಡಿಕೇಶನ್ನಿಂದ ದೊಡ್ಡ ಮಟ್ಟಿಗೆ ಬೆಳೆಯಲು ಸಾಧ್ಯವಾಯಿತು. ನಾನು ಆ ಡೆಡಿಕೇಶನ್ ಅನ್ನು ಯಶ್ ಸರ್ ಅವರಲ್ಲಿ ನೋಡಿದ್ದೇನೆ'' ಎಂದು ಗುಣಗಾನ ಮಾಡಿದರು.
''ಅಲ್ಲು ಅರ್ಜುನ್ ಸರ್ ಸೆಟ್ನಲ್ಲಿ ಒಂದು ಕಂಫರ್ಟ್ ಬಿಲ್ಡ್ ಮಾಡುತ್ತಿದ್ದರು. ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮುಗಿದ ಮೇಲೆ ಅವರು ಸೀದಾ ಹೋಗುತ್ತಿರಲಿಲ್ಲ. ನಮ್ಮ ಹತ್ತಿರ ಬಂದು ಯಾರಿದಾದರೂ ಏಟಾಯಿತೇ? ಇಲ್ವೇ? ಎಂದು ಕೇಳುತ್ತಿದ್ರು. ಅವರ ಕಾಳಜಿ ನನಗೆ ತುಂಬಾನೇ ಖುಷಿ ಕೊಡ್ತು'' ಎಂದು ತಿಳಿಸಿದರು.
ಇದರ ಜೊತೆಗೆ ''ನಾನು ಜಾತ್ರೆ ಸೀನ್ ಮಾಡಬೇಕಾದ್ರೆ ನನ್ನ ಮೇಕಪ್ಗೆ ಎರಡರಿಂದ ಮೂರು ಗಂಟೆ ಸಮಯ ಹಿಡಿಯುತ್ತಿತ್ತು. ಸ್ಪಾಟ್ಗೆ ಬೆಳಗ್ಗೆ 7 ಗಂಟೆಗೆ ಹೋದ್ರೆ ಚಿತ್ರೀಕರಣ 10 ಗಂಟೆಗೆ ಆರಂಭವಾಗುತ್ತಿತ್ತು. ಅಷ್ಟು ಪರ್ಫೆಕ್ಟ್ ಆಗಿ ಇರುತ್ತಿತ್ತು. ಅರ್ಧ ತಲೆ ಬೋಳಿಸಿಕೊಂಡಿರುವ ಗೆಟಪ್ನಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ'' ಎಂದರು.
''ನಾನು ಬಹುಭಾಷೆಯ ಸಿನಿಮಾ ಮಾಡಲು ಪ್ರಮುಖ ಕಾರಣ ಕೆಜಿಎಫ್ ಸಿನಿಮಾ. ಈ ಚಿತ್ರ ಬೇರೆ ಸ್ಟೇಟ್ಗಳಲ್ಲಿ ಬಿಡುಗಡೆ ಆದ ಬಳಿಕ, ನೀವು ಕೆಜಿಎಫ್ನಲ್ಲಿ ಆ್ಯಕ್ಟ್ ಮಾಡಿದ್ದೀರಾ ಅಂತಾ ಜನ ಕೇಳ್ತಾರೆ. ಕೆಜಿಎಫ್ ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ'' ಅಂತಾರೆ ಪೊನ್ನಪ್ಪ.
ಅದೇ ರೀತಿ ''ಜೂನಿಯರ್ ಎನ್ಟಿಆರ್ ಸಿನಿಮಾದಲ್ಲಿ ನನಗ ಅವಕಾಶ ಸಿಕ್ಕಿದ್ದು ಸಹ ಕೆಜಿಎಫ್ ಚಿತ್ರದ ದೊಡ್ಡ ಮಟ್ಟದ ಯಶಸ್ಸಿನಿಂದಾಗಿ. ದೇವರ ಚಿತ್ರ ಮಾಡಬೇಕಾದ್ರೆ ನನಗೆ ಪುಷ್ಪ 2 ಚಿತ್ರದಿಂದ ಆಫರ್ ಬಂತು. ಆಗ ಡೈರೆಕ್ಟರ್ ಸುಕುಮಾರ್ ಸರ್ ನನ್ನ ಹೈಟ್ ಪರ್ಸನಾಲಿಟಿ ಹಾಗೂ ಕಣ್ಣುಗಳನ್ನು ನೋಡಿ ಅಡಿಷನ್ಗೆ ಅವಕಾಶ ಕೊಟ್ಟರು. ಆಗ ನನ್ನ ನಟನೆ ನೋಡಿ ನಮ್ಮ ಪಾತ್ರಕ್ಕೆ ಕರೆಕ್ಟ್ ಆಗಿ ಸೂಟ್ ಆಗ್ತೀರಾ ಅಂತಾ ಸೆಲೆಕ್ಟ್ ಮಾಡಿದ್ರು'' ಅಂತಾ ತಿಳಿಸಿದರು.
''ನಾನು ಸಿನಿಮಾ ಇಂಡಸ್ಟ್ರಿಗೆ ಬಂದು ಒಂದೇ ಬಾರಿಯೂ ಗುರುತಿಸಿಕೊಳ್ಳಲಿಲ್ಲ. ಸಾಕಷ್ಟು ಸಿನಿಮಾಗಳನ್ನು ಮಾಡಿ ಸೋತಿದ್ದೇನೆ. ಆಗ ಈ ಸಿನಿಮಾ ಸಹವಾಸ ಸಾಕೆಂದು ಅನಿಸಿತ್ತು. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸುತ್ತಿರೋದನ್ನು ನೋಡಿದ್ರೆ ನನ್ನ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದನಿಸುತ್ತಿದೆ. ಅದು ನನಗೆ ಖುಷಿ ಕೊಟ್ಟಿದೆ'' ಎಂದು ತಿಳಿಸಿದರು.
ಇದನ್ನೂ ಓದಿ: 14 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ: ಗೋವಾದಲ್ಲಿ ಪ್ರಿಯತಮನನ್ನು ವರಿಸಲಿರುವ ನಟಿ ಕೀರ್ತಿ ಸುರೇಶ್?
ಇನ್ನೂ ತಾರಕ್ ಪೊನ್ನಪ್ಪ ಹೇಳಿದಂತೆ, ಅವರ ತಂದೆ ತಾಯಿ ನನ್ನ ಮಗ ಆರ್ಮಿ ಅಥವಾ ಸ್ಪೋರ್ಟ್ಸ್‌ನಲ್ಲಿ ಇರಬೇಕೆಂದು ಆಸೆ ಪಟ್ಟಿದ್ದರಂತೆ. ಆದ್ರೆ ಅವರು ಶಾಲಾ, ಕಾಲೇಜು ದಿನಗಳಲ್ಲಿ ನಾಟಕ, ಡ್ಯಾನ್ಸ್ ಮಾಡುತ್ತಿದ್ದರು. ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ರು. ಇದು ಅವರು ಸಿನಿಮಾ ಕ್ಷೇತ್ರ ಪ್ರವೇಶಿಸಲು ಕಾರಣವಾಯಿತು.
ಇದನ್ನೂ ಓದಿ: 'ಟೈಗರ್ ಶ್ರಾಫ್ ಕಾಣುವುದಕ್ಕಿಂತಲೂ ಹೆಚ್ಚು ಅದ್ಭುತ': 'ಬಾಘಿ 4' ನಿರ್ದೇಶಕ ಹರ್ಷ ಹೇಳಿದ್ದಿಷ್ಟು
ಇದರ ಜೊತೆಗೆ, ಆರಂಭದಲ್ಲಿ ಸಿನಿಮಾಗಳು ಸೋತಾಗ ತಂದೆ ತಾಯಿ ಏಕೆ ಈ ಸಿನಿಮಾಗೆ ಹೋಗಿ ಕಷ್ಟ ಪಡ್ತಾನೆ, ಸಿನಿಮಾ ಯಾವಾಗ ಬಿಡ್ತಾನೆ ಅಂತಾ ಹೇಳಿದ್ರಂತೆ. ಆದ್ರೆ ಕೆಜಿಎಫ್ ಸಿನಿಮಾ ಬಂದಾಗ ತಂದೆ ತಾಯಿಗೆ ನಂಬಿಕೆ ಬಂತು. ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದು, ಪೋಷಕರು ಸಂತೋಷವಾಗಿದ್ದಾರೆ. ನನಗೆ ಬಹಳಾನೇ ಹೆಮ್ಮೆ ಇದೆ ಅಂತಾರೆ ತಾರಕ್ ಪೊನ್ನಪ್ಪ.