ರಾಯಚೂರು: ಸಿ.ಎ. ಸೈಟ್‌ನಲ್ಲಿ (ನಾಗರಿಕ ಸೌಕರ್ಯ ನಿವೇಶನ) ಅಕ್ರಮವಾಗಿ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂದು ತಡರಾತ್ರಿ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ನಗರದಲ್ಲಿನ ಶಿವ ಗಣೇಶ ದೇಗುಲವನ್ನು ರಾತ್ರೋರಾತ್ರಿ ಜೆಸಿಬಿ ಸಹಾಯದಿಂದ ತೆರವು ಮಾಡಲಾಗಿದೆ.
ರಾಯಚೂರು ಸಹಾಯಕ ಆಯುಕ್ತ ಗಜಾನನ ಬಾಳೆ ನೇತೃತ್ವದಲ್ಲಿ ಸಂತೋಷ ನಗರದಲ್ಲಿನ ಶಿವ ಹಾಗೂ ಗಣೇಶ ದೇವಸ್ಥಾನವನ್ನು ತಡರಾತ್ರಿ ತೆರವುಗೊಳಿಸಲಾಗಿದೆ. ಮನೆ ಕಟ್ಟುವ ವೇಳೆ ಸಿಮೆಂಟ್ ಹಾಗೂ ಇತರೆ ಸಾಮಗ್ರಿಗಳನ್ನು ಇಡಲು ಶೆಡ್ ಕಟ್ಟಲಾಗಿತ್ತು. ಅದೇ ಶೆಡ್ ಅನ್ನು ದೇಗುಲ ಮಾಡಿಕೊಂಡು ಬಡಾವಣೆಯ ನಿವಾಸಿಗಳು ಪೂಜೆ ಮಾಡುತ್ತಿದ್ದರು. ಆದರೆ ಈ ಸಿ.ಎ. ಸೈಟ್ 2022ರ ಜೂನ್ 1ರಂದು ಪ್ರೌಢಶಾಲೆ ಕಟ್ಟಡಕ್ಕೆ ಮಂಜೂರಾಗಿತ್ತು. ಇದರ ಬೆನ್ನಲ್ಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಬಡಾವಣೆಯ ಜನರು ವಿರೋಧ ವ್ಯಕ್ತಪಡಿಸಿದ್ದರು.
ರಾಯಚೂರಿನ ಎಲ್.ಬಿ.ಎಸ್.ನಗರ ಪ್ರೌಢಶಾಲೆಯ ಹೆಸರಿಗೆ ಜಾಗ ಮಂಜೂರು ಮಾಡಲಾಗಿತ್ತು. ಜಾಗ ಮಂಜೂರಾದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ.
ಸ್ಥಳೀಯರ ವಿರೋಧದ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ದೇಗುಲ ತೆರವು ಕಾರ್ಯ ನಡೆದಿದೆ. ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ, ಹೆಚ್ಚುವರಿ ಎಸ್ಪಿಗಳಾದ ಶಿವಕುಮಾರ್ ಮತ್ತು ಹರೀಶ್, ಮೂವರು ಡಿವೈಎಸ್ಪಿಗಳು, 10ಕ್ಕೂ ಹೆಚ್ಚು ಪಿಐ ಹಾಗೂ ನೂರಾರು ಪೊಲೀಸ್ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಈ ಬಗ್ಗೆ ಜಿಲ್ಲಾಧಿಕಾರಿ ನಿತೀಶ್ ಕೆ. ಪ್ರತಿಕ್ರಿಯಿಸಿ, ''ಎಲ್.ಬಿ.ಎಸ್.ನಗರದ ಸಿ.ಎ. ಸೈಟ್ ಸರ್ಕಾರಿ ಶಾಲೆಗೆ ಮಂಜೂರಾಗಿತ್ತು. ಆದರೆ ಸ್ಥಳೀಯರು ಶಾಲೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಶೆಡ್ನಲ್ಲಿ ದೇವರ ಮೂರ್ತಿ ಇಟ್ಟು ದೇವಸ್ಥಾನ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಹೀಗಾಗಿ, ಶಾಲೆ ಕಾಮಗಾರಿ ಮಾಡಲು ಸಾಧ್ಯವಾಗಿರಲಿಲ್ಲ. ಕೆಡಿಪಿ ಸಭೆಯಲ್ಲೂ ಕೂಡ ದೇವಸ್ಥಾನ ತೆರವಿನ ಬಗ್ಗೆ ಚರ್ಚೆಯಾಗಿತ್ತು. ನಿನ್ನೆ ತಡರಾತ್ರಿ ತೆರವು ಕಾರ್ಯ ಮಾಡಿದ್ದೇವೆ. ಜಾಗ ಮಂಜೂರಾದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ. ಕೆಕೆಆರ್ಡಿಬಿ ಅನುದಾನದಲ್ಲಿ ಶಾಲಾ ಕಾಮಗಾರಿಯನ್ನೂ ಆರಂಭಿಸಲಾಗಿದೆ'' ಎಂದು ತಿಳಿಸಿದರು.
ಕೆಲ ಸಂಘಟನೆಗಳೂ ಸಹ ಮಂಜೂರಾದ ಸ್ಥಳದಲ್ಲಿ ಶಾಲಾ ಕಟ್ಟಡ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ಸರ್ಕಾರದಿಂದಲೇ ತಜ್ಞ ವೈದ್ಯರಿಂದ 'ಉಚಿತ ಸೆಕೆಂಡ್ ಒಪಿನಿಯನ್'