ಸಿನಿಮಾ ಎಂಬ ಕ್ರಿಯೇಟಿವ್ ಫೀಲ್ಡ್ನಲ್ಲಿ ಪ್ರತಿಭೆ ಜೊತೆಗೆ ಪರಿಶ್ರಮ ಇದ್ದರೆ ಯಶಸ್ಸು ಉತ್ತುಂಗಕ್ಕೇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮಾತು ಸಾಕಷ್ಟು ಕಲಾವಿದರು, ನಿರ್ದೇಶಕರ ಜೀವನದಲ್ಲಿ ನಿಜವಾಗಿದೆ. ಇದೇ ಸಾಲಿನಲ್ಲಿ ನೃತ್ಯ ನಿರ್ದೇಶಕ ಕಮ್ ಸಿನಿಮಾ ನಿರ್ದೇಶಕ ಎ.ಹರ್ಷ ಅವರಿದ್ದಾರೆ.
ಖಾಸಗಿ ಚಾನಲ್ನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದ ಹರ್ಷ 'ಗೆಳೆಯ' ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ಆ ಚಿತ್ರದ ಬಳಿಕ ಕೆಲ ಸಿನಿಮಾಗಳು ಮೂಡಿ ಬಂದಿದ್ದು, ಹರ್ಷ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಳ್ಳುತ್ತಾರೆ. ಚಂದನವನದ ಹೆಸರಾಂತ ನಟರಾದ ದರ್ಶನ್, ಪುನೀತ್ ರಾಜ್‍ಕುಮಾರ್, ಶಿವರಾಜ್ಕುಮಾರ್ ಹಾಗೂ ತೆಲುಗಿನಲ್ಲಿ ಗೋಪಿ ಚಂದ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿ ಜನಪ್ರಿಯರಾಗಿದ್ದಾರೆ.
ಈ ಚಿತ್ರ ಆದ್ಮೇಲೆ ಎ ಹರ್ಷ ಅದ್ಯಾವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬಂದ ಬೆನ್ನಲ್ಲೇ, ಹೊಸದೊಂದು ಚಿತ್ರ ಘೋಷಣೆಯಾಗಿದೆ. ನಿರ್ದೇಶಕ ಹರ್ಷ ತಮ್ಮ ಬನಶಂಕರಿ ನಿವಾಸದಿಂದ ಹಿಡಿದು ಬಾಲಿವುಡ್ವರೆಗೂ ಸಖತ್ ಟಾಕ್ ಆಗುವ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಬಾಲಿವುಡ್ ಆ್ಯಕ್ಷನ್ ಸ್ಟಾರ್ ಟೈಗರ್ ಶ್ರಾಫ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇಂದು ಶೂಟಿಂಗ್ ಶುರುವಾಗಿದ್ದು, ಬಾಘಿ 4 ಸಿನಿಮಾದ ಮೊದಲ ಪೋಸ್ಟರ್ ಸಹ ಅನಾವರಣಗೊಂಡಿದೆ. ಅಲ್ಲದೇ ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ. ಬಾಲಿವುಡ್ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಎ ಹರ್ಷ ಅವರು ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ. ಎಕ್ಸ್ಕ್ಲೂಸಿವ್ ಟಾಕ್ ಇಲ್ಲಿದೆ.
''ಬಾಘಿ 4 ಸಿನಿಮಾ ಶೂಟಿಂಗ್ ಶುರುವಾಗಿದೆ. ಎಲ್ಲವೂ ದೇವರ ಆಶೀರ್ವಾದ. ಬಹಳ ಖುಷಿಯಾಗಿದೆ. ಮುಂಬೈನಲ್ಲಿ 6 ತಿಂಗಳಿನಿಂದ ಕೆಲಸ ನಡೆಯುತ್ತಿದೆ. ಇಂದು ಶೂಟಿಂಗ್ ಶುರುವಾಗಿದೆ. ಕನ್ನಡದ ತಂತ್ರಜ್ಞರು ಚಿತ್ರ ತಂಡದಲ್ಲಿದ್ದಾರೆ. ನಟ ಟೈಗರ್ ಶಾಫ್ ವಂಡರ್ಫುಲ್ ಪರ್ಸನ್. ಸಾಧಿಸಬೇಕು ಎಂಬ ಛಲ ದೊಡ್ಡ ಮಟ್ಟದಲ್ಲಿದೆ. ಅವರಿಗೆ ಸಿನಿಮಾ ಬಿಟ್ಟು ಬೇರೆ ಪ್ರಪಂಚ ಇಲ್ಲ. ಸಿನಿಮಾದಲ್ಲಿ ಕಾಣುವುದಕ್ಕಿಂದ ವೈಯಕ್ತಿಕವಾಗಿ ಅವರು ಹತ್ತರಷ್ಟು ಸಕ್ರಿಯರು. ಅವರ ವಾರ್ ಸಿನಿಮಾ ತುಂಬಾ ಇಷ್ಟ. ಬಾಘಿ 2, 3 ಸಹ ಬಹಳ ಇಷ್ಟವಾಯಿತು. ಅದ್ಭುತ ಡ್ಯಾನ್ಸರ್. ಆ್ಯಕ್ಷನ್ ಸ್ಟಾರ್'' - ನಿರ್ದೇಶಕ ಎ.ಹರ್ಷ.