'ಮ್ಯಾಕ್ಸ್', ತನ್ನ ಶೀರ್ಷಿಕೆಯಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಟಾಕ್ ಆಗುತ್ತಿರುವ ಸಿನಿಮಾ. ಸೂಪರ್ ಹಿಟ್ 'ವಿಕ್ರಾಂತ್ ರೋಣ' ಚಿತ್ರದ ಬಳಿಕ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರ. ಹೀಗಾಗಿ, ಕಿಚ್ಚನ ಅಭಿಮಾನಿ ಬಳಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಇತ್ತೀಚೆಗೆ ರಿವೀಲ್ ಆದ ಟೀಸರ್ ಚಿತ್ರದ ಮೇಲಿನ ನಿರೀಕ್ಷೆ, ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅಭಿನಯ ಚಕ್ರವರ್ತಿಯ 'ಮ್ಯಾಕ್ಸ್' ಆಗಸ್ಟ್ನಲ್ಲಿ ರಿಲೀಸ್ ಆಗಬೇಕಿತ್ತು. ಆದ್ರೆ ಈ ಚಿತ್ರದ ಗ್ರಾಫಿಕ್ಸ್, ವಿಎಫ್ಎಕ್ಸ್ ಕೆಲಸ ಮುಗಿಯದ ಕಾರಣ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.
ಇತ್ತೀಚೆಗೆ ಅನಾವರಣಗೊಂಡಿರುವ 'ಮ್ಯಾಕ್ಸ್' ಟೀಸರ್ ನೋಡಿದ್ರೆ, ಇದೊಂದು ಪಕ್ಕಾ ಮಾಸ್ ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನ ಸಿನಿಮಾ ಅನ್ನೋದು ಬಹುತೇಕ ಪಕ್ಕಾ ಆಗಿದೆ. ಕಿಚ್ಚನನ್ನು ಟೀಸರ್ನಲ್ಲಿ ಮಾಸ್ ಅವತಾರದಲ್ಲಿ ತೋರಿಸಲಾಗಿದೆ. ಆದ್ರೆ ಈ ಸಿನಿಮಾದಲ್ಲಿ ಕಿಚ್ಚ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದು, ಕಥೆಯ ಸುತ್ತಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಚಿತ್ರದಲ್ಲಿ ಸುದೀಪ್ ಭರ್ಜರಿ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಈ ಟೀಸರ್ ಮೂಲಕ ಸುಳಿವು ಸಿಕ್ಕಿದೆ. ಆ್ಯಕ್ಷನ್ ದೃಶ್ಯಗಳು ಮೈಜುಂ ಎನ್ನಿಸುವಂತಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಟೀಸರ್‌ನ ಕೊನೆಯಲ್ಲಿ ಬರುವ ಸುದೀಪ್ ಡ್ಯಾನ್ಸ್ ದೃಶ್ಯ, ಥಿಯೇಟರ್‌ನಲ್ಲಿ ಫ್ಯಾನ್ಸ್‌ಗೆ ಭರ್ಜರಿ ಟ್ರೀಟ್ ಸಿಗಲಿದೆ ಅನ್ನೋ ವಿಶ್ವಾಸವಿದೆ.
ಚಿತ್ರದಲ್ಲಿ ಸುದೀಪ್ ಜೊತೆ ವರಲಕ್ಷ್ಮೀ ಶರತ್‌ಕುಮಾರ್, ತೆಲುಗು ನಟ ಸುನೀಲ್, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ನರೇನ್, ಸಂಯಕ್ತಾ ಹೊರನಾಡು ಸೇರಿದಂತೆ ಹಲವರು ನಟಿಸಿದ್ದಾರೆ. ಸುದೀಪ್ ಈ ಚಿತ್ರದಲ್ಲಿ ಅಭಿನಯ ಅಷ್ಟೇ ಅಲ್ಲದೇ, ನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್ ತನು ಅವರ ವಿ. ಕ್ರಿಯೇಷನ್ಸ್ ಹಾಗೂ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬರೋಬ್ಬರಿ 50 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ನಿರೀಕ್ಷೆ ಕೊಂಚ ಹೆಚ್ಚೇ ಇದೆ.