ಸ್ಯಾಂಡಲ್ವುಡ್ನಲ್ಲಿ ಸೀಕ್ವೆಲ್ ಚಿತ್ರಗಳ ದರ್ಬಾರ್ ಜೋರಾಗಿದೆ. 2022ರಲ್ಲಿ ತೆರೆಕಂಡ 'ಅವತಾರ ಪುರುಷ' ಸಿನಿಮಾ ಸಿನಿಪ್ರೇಮಿಗಳ ಮನಗೆದ್ದಿತ್ತು. ಇದೀಗ 'ಅವತಾರ ಪುರುಷ 2' ಚಿತ್ರದ ಶೂಟಿಂಗ್ ಮುಗಿದು, ಕೊನೆಗೂ ಬಿಡುಗಡೆಗೆ ರೆಡಿಯಾಗಿದೆ. ಸಿಂಪಲ್ ಸುನಿ ನಿರ್ದೇಶನ ಹಾಗೂ ಶರಣ್ ಅಭಿನಯದ ಈ ಚಿತ್ರದ ಬಗ್ಗೆ ಕೆಲ ಮಹತ್ವದ ವಿಚಾರಗಳು ಹೊರಬಿದ್ದಿವೆ.
ಈ ಬಗ್ಗೆ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ''2022ರಲ್ಲಿ ಬಂದ ಅವತಾರ ಪುರುಷ ಚಿತ್ರವು ಎಲ್ಲರ ಮೆಚ್ಚುಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಅವತಾರ ಪುರುಷ 2 ಯಾವಾಗ ರಿಲೀಸ್? ಎಂದು ಎರಡು ವರ್ಷಗಳಿಂದ ಸ್ನೇಹಿತರು ಹಾಗೂ ಅಭಿಮಾನಿಗಳು ಕೇಳುತ್ತಿದ್ದರು. ಈಗ ನಮ್ಮ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮೊದಲ ಭಾಗ ನೋಡಿದವರಿಗೂ, ನೋಡದವರಿಗೂ ಈ ಚಿತ್ರವು ಖಂಡಿತವಾಗಿಯೂ ಇಷ್ಟವಾಗಲಿದೆ'' ಎಂದರು.
''ಉತ್ತಮ ಮನೋರಂಜನಾ ಚಿತ್ರವಿದು. ಶರಣ್ ನಾಯಕ ಹಾಗೂ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಲಾವಿದರು ಹಾಗೂ ತಾಂತ್ರಿಕ ವರ್ಗದವರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ'' ಎಂದು ಸುನಿ ಹೇಳಿದರು.
ನಟ ಶರಣ್ ಮಾತನಾಡಿ, ''ನಿರ್ದೇಶಕ ಸಿಂಪಲ್ ಸುನಿ ಹಾಗೂ ನಿರ್ಮಾಪಕ ಪುಷ್ಕರ್ ಅವರ ಸಿನಿಮಾಪ್ರೀತಿ ನನಗೆ ಬಹಳ ಇಷ್ಟವಾಯಿತು. ಅವತಾರ ಪುರುಷ 2 ಯಾವಾಗ ಬಿಡುಗಡೆಯಾಗುತ್ತದೆ ಎಂದು ನನ್ನನ್ನು ಕೂಡ ಬಹಳಷ್ಟು ಜನರು ಕೇಳುತ್ತಿದ್ದರು. ಚಿತ್ರದ ಎರಡನೇ ಭಾಗ ಇಷ್ಟು ಕುತೂಹಲ ಹುಟ್ಟಿಸಿದೆ ಎಂದರೆ ನಿಜಕ್ಕೂ ಮೊದಲ ಭಾಗ ಎಲ್ಲರಿಗೂ ಇಷ್ಟವಾಗಿದೆ ಎಂದರ್ಥ. ನಾನು, ನನ್ನ ಯಾವ ಸಿನಿಮಾವನ್ನೂ ಮೊದಲು ನೋಡುವುದಿಲ್ಲ. ಅಭಿಮಾನಿಗಳ ಜೊತೆಗೆ ಚಿತ್ರಮಂದಿರದಲ್ಲೇ ವೀಕ್ಷಿಸುತ್ತೇನೆ. ಈ ಚಿತ್ರ ನೋಡಲು ನಾನು ಕೂಡ ಕಾತರದಿಂದ ಕಾಯುತ್ತಿದ್ದೇನೆ. ಕೆಲವರು ಸ್ವಲ್ಪ ತಡವಾಯಿತು ಎನ್ನುತ್ತಿದ್ದಾರೆ. ಹಾಗೇನಿಲ್ಲ, ಮೊದಲ ಭಾಗ ಕೂಡ 22ರಲ್ಲೇ ಬಿಡುಗಡೆಯಾಗಿತ್ತು. ಎರಡನೇ ಭಾಗ 2024ರ ಮಾರ್ಚ್ 22ರಂದು ರಿಲೀಸ್ ಆಗಲಿದೆ'' ಎಂದರು.