ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಶಿಕ್ಷಣ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. 'ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್' ಅನ್ನು ಪ್ರಾರಂಭಿಸಲು ಅವರು ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಶ್ರುತಿ ಕಿರಣ್ ಮತ್ತು ಡಾ.ಬಿಂದು ರಾಣಾ ಅವರೊಂದಿಗೆ ಕೈಜೋಡಿಸಿದ್ದಾರೆ.
ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್, ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಹೊಸ ದಾರಿ ನಿರ್ಮಿಸಲು ಸಜ್ಜಾಗಿದೆ. ಖ್ಯಾತ ಶಿಕ್ಷಣತಜ್ಞೆ ಸುನೀತಾ ಗೌಡ ನೇತೃತ್ವದಲ್ಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ದೂರದೃಷ್ಟಿಯ ಪ್ರೋತ್ಸಾಹ ಮತ್ತು ಡಾ.ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ ಈ ಶಾಲೆಯನ್ನು ಮಕ್ಕಳಲ್ಲಿ ಅವರ ಆರಂಭಿಕ ವರ್ಷಗಳಲ್ಲಿ ನಾಯಕತ್ವ, ಸೃಜನಶೀಲತೆ ಮತ್ತು ಉದ್ಯಮಶೀಲತೆಯ ಚಿಂತನೆಯನ್ನು ಪೋಷಿಸಲು ವಿನ್ಯಾಸಗೊಳಿಸಲಾಗಿದೆ.
ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ ಸ್ಪೂರ್ತಿ ವಿಶ್ವಾಸ್ ಅವರು ತಮ್ಮ ಅನುಭವದೊಂದಿಗೆ ಮುಂದಿನ ತಲೆಮಾರಿನ ಆತ್ಮವಿಶ್ವಾಸಿ ಯುವ ನಾಯಕರಿಗೆ ಸ್ಫೂರ್ತಿ ನೀಡಲು ಕೈಜೋಡಿಸಿದ್ದಾರೆ. ಈ ಯೋಜನೆ ಇಂಡಿಯನ್ ವುಮನ್ ಅಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಶಿಕ್ಷಣತಜ್ಞೆ ಐಶ್ವರ್ಯಾ ಡಿ.ಕೆ. ಎಸ್ ಹೆಗ್ಡೆ ಅವರ ಸಾನಿಧ್ಯದಲ್ಲಿ ಉದ್ಘಾಟನೆಯಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಾನು ಮತ್ತು ಪುನೀತ್ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸುವ ಕನಸು ಕಂಡಿದ್ದೆವು. ಈ ಯೋಜನೆ ನಮ್ಮ ಕನಸನ್ನು ನನಸಾಗಿಸುತ್ತಿದೆ. ಪ್ರತೀ ಮಗುವಿನ ಸಾಮರ್ಥ್ಯವನ್ನು ಪೋಷಿಸುವ ಶಾಲೆಗಳನ್ನು ರಚಿಸುವುದು, ಎಜುಕೇಶನ್ ಎಕ್ಸಲೆನ್ಸ್ ಮಾತ್ರವಲ್ಲದೇ ಪಾತ್ರ ಮತ್ತು ನಾಯಕತ್ವವನ್ನೂ ನಿರ್ಮಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಸಚಿವ ಡಾ.ಸುಧಾಕರ್ ಮಾತನಾಡಿ, ಶಿಕ್ಷಣ ವ್ಯಕ್ತಿಯ ಭವಿಷ್ಯದ ಸ್ಥಾಪನೆಯ ಪ್ರಮುಖ ಕೀಲಿ. ಪ್ರೀಸ್ಕೂಲ್‌ಗಳಲ್ಲಿ ಕಳೆದ ಹಲವು ವರ್ಷಗಳಿಂದ ಪಠ್ಯಕ್ರಮದಲ್ಲಿ ಗಣನೀಯ ಬದಲಾವಣೆಗಳು ನಡೆದಿವೆ. ಈ ಮಹಿಳಾ ತಂಡವು ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.