ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ''ಬಿಗ್ ಬಾಸ್ ಸೀಸನ್ 11'' ತನ್ನ ಆಟ ಮುಂದುವರಿಸಿದೆ. ಎಂದಿನಂತೆ ಮನೆಯಲ್ಲಿ ಕಿರುಚಾಟ, ವಾದ ವಿವಾದ, ಗಟ್ಟಿ ಚರ್ಚೆ, ಮುನಿಸು ಮುಂದುವರಿದಿವೆ. ಇಂದೂ ಕೂಡಾ ಅದೇ ವಾತಾವರಣ ಇರಲಿದೆ ಎಂಬುದರ ಸುಳಿವನ್ನು ಪ್ರೋಮೋ ಬಿಟ್ಟುಕೊಟ್ಟಿದೆ.
''ಮನೆಯಲ್ಲಿ ಗೊಬ್ಬರ, ಮನಸ್ಸುಗಳೂ ಗೊಬ್ಬರ!?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ 9:30ಕ್ಕೆ ಎಂಬ ಶೀರ್ಷಿಕೆಯಡಿ ಕಲರ್ಸ್ ಕನ್ನಡ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪ್ರೋಮೋ ಅನಾವರಣಗೊಳಿಸಿದೆ. ಅದರಲ್ಲಿ ಬಿಗ್ ಬಾಸ್ ಮನೆಯಲ್ಲಿ ಗೊಬ್ಬರವಿದ್ದು, ಮನಸ್ಸುಗಳೂ ಗೊಬ್ಬರ? ಆದಂತೆ ತೋರುತ್ತಿದೆ.
ಗೊಬ್ಬರದ ಅಬ್ಬರ, ತಮ್ಮ ಬಣ್ಣದ ಚೆಂಡುಗಳನ್ನು ದೂಡಿಕೊಂಡು ತಂದು ತಮಗೆ ಮೀಸಲಿರುವ ಸ್ಟ್ಯಾಂಡ್ನಲ್ಲಿ ಇಡಬೇಕು ಎಂದು ಬಿಗ್ ಬಾಸ್ ಟಾಸ್ಕ್ ಒಂದನ್ನು ಕೊಟ್ಟಿದ್ದಾರೆ. ಅದರಂತೆ ಆಟ ಶುರುವಾಗಿದೆ. ನಂತರ ನಿಯಮಗಳ ವಿಷಯವಾಗಿ ಸ್ಪರ್ಧಿಗಳು ಮತ್ತು ಕ್ಯಾಪ್ಟನ್ ನಡುವೆ ವಾದ ವಿವಾದ ಶುರುವಾಗಿದೆ.
ಆಟದಲ್ಲಿ ಸ್ವರ್ಗ ನಿವಾಸಿಗಳು ಗೆದ್ದಂತೆ ತೋರಿದೆ. ನಂತರ ಅಸಮಧಾನಗೊಂಡ ಕೆಲ ನರಕವಾಸಿ ಸ್ಪರ್ಧಿಗಳು ಕ್ಯಾಪ್ಟನ್ ಮೇಲೆ ಕಿಡಿ ಕಾರಿದ್ದಾರೆ. ನಿಮಗೆ ಕಣ್ಣಿಲ್ವಾ ನೋಡೋಕೆ? ಅವರ ಜೊತೆ ಊಟ ಮಾಡೋ ಹಾಗಿದ್ರೆ ಮನೆಗೆ ಹೋಗಿ ಋಣ ತೀರಿಸಿ, ಆಟದಲ್ಲಲ್ಲಾ. ಯಾವ ಸೀಮೆ ಕ್ಯಾಪ್ಟನ್ ರೀ ನೀವು. ಬಿಗ್ ಬಾಸ್ ನಾವಿನ್ನು ಯಾವ ಗೇಮ್ ಅನ್ನೂ ಆಡೋದಿಲ್ಲ. ಮೋಸ, ಅನ್ಯಾಯ ಎಂಬ ಮಾತುಗಳು ನರಕವಾಸಿ ಸ್ಪರ್ಧಿಗಳಿಂದ ಕೇಳಿಬಂದಿವೆ. ಕೊನೆಗೆ ಹೋರಾಟ ಮಾಡುವರಂತೆ ತೋರಿದೆ. ಇಲ್ಲಿ ಸರಿ ಯಾರು? ತಪ್ಪು ಯಾರದ್ದು? ಎಂಬುದು ನಿಮಗೆ ಬಿಟ್ಟದ್ದು. ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರ ಗಮನ ಸೆಳೆದಿದೆ. ನೆಟ್ಟಿಗರು ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ವಾರ ಮನೆಯಲ್ಲಿರುವ ಪ್ರತಿಯೊಬ್ಬರೂ ನಾಮಿನೇಟ್ ಆಗಿದ್ದಾರೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು. ಅನುಷಾ, ತ್ರಿವಿಕ್ರಮ್, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ, ರಂಜಿತ್ ಈ ವಾರದ ಎಲಿಮಿನೇಶನ್ಗೆ ನಾಮಿನೇಟ್ ಆಗಿದ್ದರು. ಆದ್ರೆ ಮನೆಯ ಕೆಲವೇ ಸ್ಪರ್ಧಿಗಳು ಮಾಡಿದ ತಪ್ಪಿನಿಂದ ಬಿಗ್ ಬಾಸ್ ಎಲ್ಲರನ್ನೂ ನಾಮಿನೇಟ್ ಮಾಡಿದ್ದಾರೆ. ಕಾರ್ಯಕ್ರಮದ ನಿಯಮಗಳ ಪ್ರಕಾರ, ಸ್ಕ್ರೀನ್ ಡೌನ್ ಆಗಿದ್ದಾಗ ಯಾರೂ ಇಣುಕಿ ನೋಡುವಂತಿಲ್ಲ. ಆ ಹೊತ್ತಲ್ಲಿ ಬಿಗ್ ಬಾಸ್ ಮನೆಯ ಸಿಬ್ಬಂದಿ ಒಳಗೆ ಆಗಮಿಸಿ ಟಾಸ್ಕ್ನ ಸಿದ್ಧತೆ ನಡೆಸುತ್ತಾರೆ.
ಇದನ್ನೂ ಓದಿ:ಬಿಗ್ ಬಾಸ್ನಿಂದ ಯಮುನಾ ಔಟ್; ಮನೆಯಲ್ಲಿ ಮತ್ತೆ ಕಿರುಚಾಟ: ನಿಮ್ಮ ಅಭಿಪ್ರಾಯವೇನು?
ಆದ್ರೆ ಈ ಹೊತ್ತಲ್ಲಿ ಕೆಲ ನರಕನಿವಾಸಿಗಳು ಆಚೆ ಹೋಗಿ ನೋಡಿದ್ದಾರೆ. ಮೊದಲು ಮಾನಸಾ ನಿಯಮ ಉಲ್ಲಂಘಿಸಿ, ಟಾಸ್ಕ್ ಏನಿರಬಹುದು ಎಂದು ಶಿಶಿರ್ ಅವರ ಬಳಿ ಚರ್ಚೆ ನಡೆಸಿದ್ದಾರೆ. ನಂತರ, ಮೋಕ್ಷಿತಾ, ಶಿಶಿರ್ ಕೂಡಾ ಆಚೆ ಹೋಗಿ ನೋಡಿದ್ದಾರೆ. ಇದಾದ ಬಳಿಕ ಬಟ್ಟೆ ಬದಲಿಸುವ ನೆಪದಲ್ಲಿ ಜಗದೀಶ್ ಕೂಡಾ ಹೋಗಿದ್ದಾರೆ. ಪ್ರಮುಖ ನಿಯಮವನ್ನೇ ಉಲ್ಲಂಘಿಸಿದ ಕಾರಣ, ಬಿಗ್ ಬಾಸ್ ಹಾಗೂ ನಿಯಮಗಳನ್ನು ಗೌರವಿಸದ ಸ್ಪರ್ಧಿಗಳಿಗೆ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲವೆಂದು ಬಿಗ್ ಬಾಸ್ ಹೇಳಿದ್ದಾರೆ. ಜೊತೆಗೆ, ಈ ಕ್ಷಣದಿಂದ ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರೂ ನಾಮಿನೇಟ್ ಆಗಿದ್ದಾರೆಂದು ತಿಳಿಸಿದ್ದಾರೆ. ನಿಮಯ ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆ ಕೊಡದ ಕ್ಯಾಪ್ಟನ್ ಹಂಸ ಕೂಡಾ ಇಮ್ಯುನಿಟಿ ಕಳೆದುಕೊಂಡು ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ:'ಬಿಗ್ ಬಾಸ್ ಹೆಸರು ಹಾಳ್ ಮಾಡೋಕೆ ನಿಮ್ಮ ಅಪ್ಪನಾಣೆ ಸಾಧ್ಯವಿಲ್ಲ': ಲಾಯರ್ ಜಗದೀಶ್ ಮಾತಿಗೆ ನಯವಾಗೇ ಟಾಂಗ್ ಕೊಟ್ಟ ಸುದೀಪ್ - Sudeep On Lawyer Jagdish
ಕಳೆದ ದಿನ ಕ್ಯಾಪ್ಟನ್ ಹಂಸ ಮತ್ತು ಜಗದೀಶ್ ನಡುವೆ ಹಾಸ್ಯಕ್ಷಣಗಳಿದ್ದವು. ಐ ಲವ್ ಯೂ ಕ್ಯಾಪ್ಷನ್ ಎಂದು ಕೂಡಾ ಜಗದೀಶ್ ಹೇಳಿದ್ದರು. ಆದ್ರೆ ಇಂದಿನ ಸಂಚಿಕೆಯಲ್ಲಿ ದೊಡ್ಡ ಗಲಾಟೆ ನಡೆಯಲಿದೆ ಎಂಬ ಸುಳಿವನ್ನು ಪ್ರೋಮೋ ಬಿಟ್ಟುಕೊಟ್ಟಿದೆ.