ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರ ತಂಡದ ಕಡೆಯಿಂದಲೂ ಸ್ಪೆಷಲ್ ವಿಶ್ ಬಂದಿದೆ. ಅಭಿಮಾನಿಗಳಿಗೆ ಬರ್ತಡೇ ಟ್ರೀಟ್ ಆಗಿ 'ಘಾಟಿ' ಗ್ಲಿಂಪ್ಸ್ ಅನಾವರಣಗೊಂಡಿದೆ.
ಅನುಷ್ಕಾ ಶೆಟ್ಟಿ ಅಭಿನಯದ ಮುಂದಿನ ಸಿನಿಮಾ 'ಘಾಟಿ'. ನಟಿಯ ಹುಟ್ಟುಹಬ್ಬ ಹಿನ್ನೆಲೆ, ಮೊದಲು ಪೋಸ್ಟರ್ ಅನಾವರಣಗೊಂಡಿತ್ತು. ಇದೀಗ ಗ್ಲಿಂಪ್ಸ್ ರಿಲೀಸ್ ಆಗಿದೆ. ಕ್ರಿಶ್ ಜಗರ್ಲಮುಡಿ ನಿರ್ದೇಶನದ ಘಾಟಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಸಖತ್ ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅನಾವರಣಗೊಂಡಿರುವ ಪೋಸ್ಟರ್, ಗ್ಲಿಂಪ್ಸ್ ಇದರ ಸುಳಿವು ಬಿಟ್ಟುಕೊಟ್ಟಿದೆ. 2010ರ ಸೂಪರ್ ಹಿಟ್ 'ವೇದಂ' ಸಿನಿಮಾ ಬಳಿಕ ಕ್ರಿಶ್ ಜಗರ್ಲಮುಡಿ ಮತ್ತು ಅನುಷ್ಕಾ ಶೆಟ್ಟಿ ಕಾಂಬಿನೇಶನ್ನಲ್ಲಿ ಬರುತ್ತಿರುವ ಎರಡನೇ ಚಿತ್ರವಿದು. ಅಲ್ಲದೇ, ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅನುಷ್ಕಾ ಅವರದ್ದು ನಾಲ್ಕನೇ ಚಿತ್ರ.
ಇಂದು ಅನಾವರಣಗೊಂಡಿರುವ ಗ್ಲಿಂಪ್ಸ್ನಲ್ಲಿ ಅನುಷ್ಕಾರನ್ನು ಭಯಾನಕ ನೋಟದಲ್ಲಿ ತೋರಿಸಲಾಗಿದೆ. ರಕ್ತಸಿಕ್ತ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ತಲೆ ಮತ್ತು ಕೈಗಳಲ್ಲಿ ರಕ್ತದ ಕಲೆಗಳಿದ್ದು, ನೋಟ ಬಹಳ ತೀವ್ರವಾಗಿದೆ. ಆಕ್ರೋಶಭರಿತ ಕಣ್ಣುಗಳು, ಅಂದ ಹೆಚ್ಚಿಸುವ ಕಾಡಿಗೆ, ಮೂಗುತಿಗಳು, ಬಿಂದಿ, ಕಾಲ್ಗಡ್ಗ 'ಘಾಟಿ' ಅನುಷ್ಕಾ ಶೆಟ್ಟಿಯ ತೀವ್ರತರನಾದ ರೂಪವನ್ನು ಗಮನ ಸೆಳೆಯುವಂತೆ ಮಾಡಿದೆ. ಧೂಮಪಾನ ಮಾಡುತ್ತಾ ನಟಿಯ ಎಂಟ್ರಿ ಸಕತ್ ಪವರ್ಫುಲ್ ಆಗಿದೆ. ವ್ಯಕ್ತಿಯ ರುಂಡ ಕತ್ತರಿಸಿದ ಶೈಲಿ ಕೂಡಾ ಭಯಾನಕವಾಗಿ ಮೂಡಿಬಂದಿದೆ. ಈ ರಕ್ತಸಿಕ್ತ, ಕಚ್ಛಾ, ಮೊದಲ ನೋಟವು 'ಘಾಟಿ' ಒಂದು ಕ್ರೂರ, ಅಪಾಯಕಾರಿ ಜಗತ್ತನ್ನು ತೆರೆಮೇಲೆ ತೋರಿಸಲಿದೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದೆ. ಅಂತಹ ಕ್ರೂರ ಜಗತ್ತಿನಿಂದ ಬದುಕುಳಿಯಲು ಜನ ಇಚ್ಛಿಸುತ್ತಾರಾ? ಅನುಷ್ಕಾ ಶೆಟ್ಟಿ ಕಿಡಿಗೇಡಿಗಳಿಂದ ಜನರ ರಕ್ಷಣೆಗೆ ನಿಂತರೇ? ಅಥವಾ ಅವರ ಪಾತ್ರವೇ ಭಯಾನಕವಾದದ್ದಾ? ಎಂಬುದು ಇನ್ನಷ್ಟೇ ತಿಳಿಯಬೇಕಿದೆ.