ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು. ಆ ಸಂಭ್ರಮಕ್ಕೀಗ 100 ವಸಂತ. ಶತಮಾನೋತ್ಸವದ ಸ್ಮರಣಾರ್ಥ ಕುಂದಾನಗರಿಯಲ್ಲಿ ಡಿಸೆಂಬರ್ 26ರಂದು ಕಾಂಗ್ರೆಸ್ ಪಕ್ಷದಿಂದ 'ನವ ಸತ್ಯಾಗ್ರಹ ಬೈಠಕ್' ನಡೆಸಲು ನಿರ್ಧರಿಸಲಾಗಿದೆ.
ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಇಂದು (ಮಂಗಳವಾರ) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಹಾತ್ಮ ಗಾಂಧಿ ಅವರ ಅಧ್ಯಕ್ಷೀಯ ಸ್ಮರಣಾರ್ಥವಾಗಿ ಬೆಳಗಾವಿಯಲ್ಲಿ ಪಕ್ಷದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಾಳೆ ವಿಸ್ತೃತ ಕಾರ್ಯಕಾರಿ ಸಮಿತಿಯ ಸಭೆಯೂ ನಡೆಯಲಿದೆ. ಇದರಲ್ಲಿ ಸಿಡಬ್ಲ್ಯೂಸಿ ಸದಸ್ಯರು, ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ಅದರಲ್ಲಿ ಪಕ್ಷದ 2025 ರ ಮಾರ್ಗಸೂಚಿಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಡಿಸೆಂಬರ್ 26ರಂದು ನವ ಸತ್ಯಾಗ್ರಹ ಬೈಠಕ್ ನಡೆಯಲಿದೆ. ಡಿಸೆಂಬರ್ 27ರಂದು ಜೈ ಬಾಪು, ಜೈ ಭೀಮ್ ಜೈ ಸಂವಿಧಾನ ಘೋಷವಾಕ್ಯದಡಿ ಬೃಹತ್ ರ್ಯಾಲಿ ಆಯೋಜಿಸಲಾಗುವುದು. ಗಾಂಧೀಜಿ ಅವರ ಅಧ್ಯಕ್ಷತೆಯ ಜೊತೆಗೆ, ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂಬ ಘೋಷಣೆಯನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ನೀಡಿದ್ದರಿಂದ ಕಾಂಗ್ರೆಸ್ ಇತಿಹಾಸದಲ್ಲಿ ಬೆಳಗಾವಿಗೆ ವಿಶೇಷ ಸ್ಥಾನವಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ದೇಶವು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆಸಲಾಗುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು, ಹುದ್ದೆಗೆ ರಾಜೀನಾಮೆ ನೀಡಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮಹಿಳೆಯಲ್ಲ, ಪುರುಷ ಶಿಕ್ಷಕನಿಗೆ 6 ತಿಂಗಳ ಹೆರಿಗೆ ರಜೆ ನೀಡಿದ ಬಿಹಾರ ಶಿಕ್ಷಣ ಇಲಾಖೆ