ವಿರುಷ್ಕಾ ಎಂದೇ ವಿಶ್ವಾದ್ಯಂತ ಜನಪ್ರಿಯರಾಗಿರುವ ಸ್ಟಾರ್ ಕಪಲ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮಕ್ಕಳು ವಾಮಿಕಾ ಮತ್ತು ಅಕಾಯ್ ಜೊತೆ ಪ್ರೇಮಾನಂದ ಮಹಾರಾಜರನ್ನು ವೃಂದಾವನದಲ್ಲಿ ಭೇಟಿಯಾಗಿದ್ದಾರೆ. ಈ ಆಧ್ಯಾತ್ಮಿಕ ಭೇಟಿ ಸಂದರ್ಭ ಇಬ್ಬರೂ ಮಹಾರಾಜರೊಂದಿಗೆ ಸಂವಹನ ನಡೆಸಿದರು. ಅವರಿಗೆ ಕೈಮುಗಿದು, ಭಕ್ತಿಯಿಂದ ನೆಲದ ಮೇಲೆ ಕುಳಿತು ಗೌರವ ಸೂಚಿಸಿದರು. ಆಧ್ಯಾತ್ಮಿಕ ಪ್ರಯಾಣದ ಫೋಟೋ ವಿಡಿಯೋಗಳು ಆನ್ಲೈನ್ನಲ್ಲಿ ವೈರಲ್ ಆಗಿವೆ.
ವಿಡಿಯೋವೊಂದರಲ್ಲಿ, ಅನುಷ್ಕಾ ತಮ್ಮ ಆಧ್ಯಾತ್ಮಿಕ ಪ್ರಯಾಣದ ಬಗ್ಗೆ ಮಹಾರಾಜರೊಂದಿಗೆ ಮಾತನಾಡುತ್ತಿರೋದನ್ನು ಕಾಣಬಹುದು. ನಿಮ್ಮ ಭಾಷಣಗಳನ್ನು ಕೇಳುವುದಾಗಿ ಮಹಾರಾಜರಲ್ಲಿ ತಿಳಿಸಿದರು. ಜೊತೆಗೆ "ಪ್ರೇಮಭಕ್ತಿ" ಬಗ್ಗೆ ಉಲ್ಲೇಖಿಸಿದ್ದಾರೆ. "ಕಳೆದ ಬಾರಿ ನಾವು ಬಂದಾಗ, ನಮ್ಮ ಮನಸ್ಸಿನಲ್ಲಿ ಕೆಲ ಪ್ರಶ್ನೆಗಳಿದ್ದವು, ಅವನ್ನು ಕೇಳಬೇಕೆಂದುಕೊಂಡಿದ್ದೆ. ಆದರೆ, ಅಲ್ಲಿ ಕುಳಿತಿದ್ದವರು ಅದೇ ರೀತಿಯ ಪ್ರಶ್ನೆಗಳನ್ನು ಕೇಳಿದರು" ಎಂದು ಮಹಾರಾಜರಲ್ಲಿ ಅನುಷ್ಕಾ ತಿಳಿಸಿರೋದನ್ನು ಕಾಣಬಹುದು.
ಮಾತು ಮುಂದುವರಿಸಿದ ನಟಿ, ಈ ಭೇಟಿ ಬಗ್ಗೆ ನಾವು ಪ್ಲ್ಯಾನ್ ಮಾಡುತ್ತಿದ್ದಂತೆ, ನಾನು ನನ್ನ ಆಲೋಚನೆಗಳ ಬಗ್ಗೆ ನನ್ನ ಮನದೊಳಗೇ ನಿಮ್ಮೊಂದಿಗೆ ಮಾತನಾಡುತ್ತಿದ್ದೆ. ನೀವು ನನಗೆ ಪ್ರೇಮಭಕ್ತಿಯಿಂದ ಆಶೀರ್ವದಿಸಬೇಕು ಎಂದು ನಾನು ಬಯಸುತ್ತೇನೆ" ಎಂದು ತಿಳಿಸಿದ್ದಾರೆ. ನಂತರ ಮಹಾರಾಜರು ಆಶೀರ್ವದಿಸಿದ್ದಾರೆ.
ವಿಶ್ವಮಟ್ಟದಲ್ಲಿ ಜನಪ್ರಿಯರಾಗಿರುವ ವಿರುಷ್ಕಾ ಅವರದ್ದು ಇದು ಮೊದಲ ಆಧ್ಯಾತ್ಮಿಕ ಪ್ರಯಾಣವೇನಲ್ಲ. 2022ರಲ್ಲಿ, ವಿರಾಟ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾಗ, ಕೈಂಚಿ ಧಾಮ್‌ನಲ್ಲಿರುವ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಇತ್ತೀಚೆಗೆ ಲಂಡನ್‌ನಲ್ಲಿ ಕೃಷ್ಣ ದಾಸ್ ಅವರ ಕೀರ್ತನೆ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿರೋ ವಿಡಿಯೋಗಳು ವೈರಲ್ ಆಗಿದ್ದವು. ಹೀಗೆ ಕೆಲವು ಬಾರಿ ಅಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವಿಡಿಯೋಗಳು ಲಭ್ಯವಿದೆ.