ಇಂದು ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಅಂಬರೀಶ್ ಜನ್ಮದಿನ. ಮಂಡ್ಯದ ಗಂಡು ಬದುಕಿದ್ದರೆ ಇಂದು ಸಾವಿರಾರು ಅಭಿಮಾನಿಗಳ ಜೊತೆ 72ನೇ ವರ್ಷದ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದರು. ಆದರೆ, ಅಂಬಿ ಆಗಲಿ ಆರು ವರ್ಷಗಳು ಕಳೆದಿವೆ. ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್ ಅಂಬರೀಶ್, ಸೊಸೆ ಅವಿವಾ ಬಿದ್ದಪ್ಪ ಹಾಗೂ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಆಗಮಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಲೀಲಾನಿಗೆ ಇಷ್ಟವಾಗುವ ತಿಂಡಿ ತಿನಿಸುಗಳನ್ನಿಟ್ಟಿದ್ದರು. ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.
ಸುಮಲತಾ ಅಂಬರೀಶ್ ಮಾತನಾಡಿ, ಅಂಬಿ ನಮ್ಮ ಮನಸ್ಸಲ್ಲಷ್ಟೇ ಅಲ್ಲದೇ ಅಭಿಮಾನಿಗಳ ಮನಸ್ಸಲ್ಲೂ ಇದ್ದಾರೆ. ಅವರಿಲ್ಲದೇ ಆರು ವರ್ಷಗಳಾದರೂ ಅಭಿಮಾನಿಗಳು ಮಾತ್ರ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಅವರು ಮಾಡಿದ ಒಳ್ಳೆ ಕೆಲಸಗಳಿಂದ ಜನರ ಮನಸ್ಸಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಆ ಪ್ರೀತಿಯನ್ನು ನೋಡಿ ನಾವು ತೃಪ್ತಿ ಪಡುತ್ತಿದ್ದೇವೆ. ಈ ವರ್ಷದ ಹುಟ್ಟುಹಬ್ಬಕ್ಕೆ ಮಂಡ್ಯದಲ್ಲಿ ಕಾರ್ಯಕ್ರಮ ಮಾಡಿ ನಾಲ್ಕು ಜನರಿಗೆ ಸನ್ಮಾನ ಮಾಡಲಿದ್ದೇವೆ ಎಂದು ತಿಳಿಸಿದರು.
ಇನ್ನೂ ಹೆಚ್ಚಿನ ಸಾಮಾಜಿಕ ಕೆಲಸಗಳನ್ನು ಅವರ ಹೆಸರಲ್ಲಿ ಮಾಡಬೇಕು. ಅಂಬಿ ಅವರನ್ನು ಕಲಿಯುಗದ ಕರ್ಣ ಎಂದು ಜನ ಹೇಳ್ತಿದ್ರು. ಅದನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು. ಇನ್ನು, ಅಂಬಿಗೆ ನಾನು ಹಾರ್ಟ್ ಪೆಂಡೆಂಟ್ ಕೊಟ್ಟಿದ್ದೆ, ಅವರಿಗೆ ಅದು ತುಂಬಾ ಇಷ್ಟ ಆಗಿತ್ತು. ಅವರ ಜೊತೆ ಇಷ್ಟು ವರ್ಷ ಜೀವನ ನಡೆಸಿದ್ದೇ ನನಗೆ ದೊಡ್ಡ ಗಿಫ್ಟ್. ಅವರಿಂದ ನಾನು ಬಹಳ ಇನ್ಸ್ಪೈಯರ್ ಆಗಿದ್ದೇನೆ. ಅವರಲ್ಲಿರೋ ಗುಣಗಳನ್ನು ನೋಡಿ ನಾನು ಅವರನ್ನು ಇಷ್ಟಪಟ್ಟೆ. ಅವರ ಸ್ನೇಹಿತರು, ನಮ್ಮ ಆಪ್ತರೆಲ್ಲಾ ಸೇರಿದ ವೇಳೆ ನಾವು ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಹುಟ್ಟುಹಬ್ಬದ ಸಂದರ್ಭ ಅವರಿಗೆ ಇಷ್ಟವಾದ ಅಡುಗೆ ಮಾಡಿ ತಂದು ಇಡುತ್ತೇವೆ ಎಂದು ತಿಳಿಸಿದರು.
ಇಂದು ನಮಗೆ ಒಳ್ಳೆ ದಿನ. ನಾನಿಂದು ಪೆನ್ ಡ್ರೈವ್ ಪ್ರಕರಣದ ಬಗ್ಗೆ ಮಾತನಾಡಲು ಹೋಗಲ್ಲ. ಇನ್ನೂ ಅಜ್ಜಿ ಆಗೋ ಗುಡ್ ನ್ಯೂಸ್ ಸಿಕ್ಕಾಗ ನಿಮ್ಮಲ್ಲಿ ತಿಳಿಸುತ್ತೇನೆ ಎಂದರು.