ಹೈದರಾಬಾದ್: ಪುಷ್ಪಾ ಸಿನಿಮಾದ ಶೂಟಿಂಗ್ ಮುಗಿಸಿರುವ ನಟ ಅಲ್ಲು ಅರ್ಜುನ್ ಸದ್ಯ ಕುಟುಂಬ ಸಮೇತ ದುಬೈಗೆ ತೆರಳಿದ್ದಾರೆ. ಇದಕ್ಕೆ ಕಾರಣ ದುಬೈನ ಮ್ಯಾಡಮ್ ಟ್ಯೂಸಾಡ್ಸ್ನಲ್ಲಿ ಅನಾವರಣಗೊಳ್ಳಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣ ಮಾಡಲಿದ್ದಾರೆ. ದುಬೈಗೆ ಪ್ರಯಾಣ ಬೆಳೆಸುವ ಮುನ್ನ ನಟ ಎಂದಿನಂತೆ ತಮ್ಮ ಸ್ಟೈಲಿಶ್ ಲುಕ್ನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ, ಅವರ ಪತ್ನಿ ಸ್ನೇಹಾ ರೆಡ್ಡಿ, ಮಕ್ಕಳಾದ ಅಯಾನ್ ಮತ್ತು ಅರ್ಹಾ ಕೂಡ ಕ್ಯಾಮೆರಾಗೆ ಸೆರೆ ಸಿಕ್ಕಿದ್ದಾರೆ.
ಬ್ಲಾಕ್ ಅಂಡ್ ಬ್ಲಾಕ್ ಧಿರಿಸಿನಲ್ಲಿ ನಟ ಅಲ್ಲು ಅರ್ಜುನ್ ಕಂಡು ಬಂದಿದ್ದು, ಅದಕ್ಕೆ ಮ್ಯಾಚಿಂಗ್ ಆಗಿ ಬೇಸ್ಬೇಲ್ ಕ್ಯಾಪ್ ತೊಟ್ಟಿದ್ದರು. ವಿಶೇಷ ಎಂದರೆ, ಇಬ್ಬರು ಮಕ್ಕಳು ಕೂಡ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರು. ಇನ್ನು ಸ್ನೇಹಾ ಸಹ ಹಸಿರು ಮತ್ತು ಬಿಳಿ ಬಣ್ಣದ ಶರ್ಟ್ಗೆ ಬಿಳಿ ಪ್ಯಾಂಟ್ ತೊಟ್ಟು ಕಂಗೊಳಿಸಿದರು.
ಕಳೆದ ವರ್ಷ ನಟ ಅಲ್ಲು ಅರ್ಜುನ್ ದುಬೈನ ಮ್ಯಾಡಮ್ ಟ್ಯೂಸ್ಸಾಡ್ ಮ್ಯೂಸಿಯಂನಲ್ಲಿ ಸಿದ್ಧವಾಗುತ್ತಿರುವ ಮೇಣದ ಪ್ರತಿಮೆ ಉದ್ಘಾಟನೆಗೆ ತೆರಳಿದ್ದರು. ಆದರೆ, ಇದು ಕಾರಣಾಂತರದಿಂದ ತಡವಾಗಿತ್ತು. ಇದೀಗ ಅವರ ಅಭಿಮಾನಿಗಳು ಕಾಯುತ್ತಿರುವ ಅಂತಿಮ ಕ್ಷಣ ಆಗಮಿಸಿದೆ. ದುಬೈನ ಮ್ಯೂಸಿಯಂ ಖುದ್ದು ಈ ಪ್ರತಿಮೆ ಅನಾವರಣ ವಿಚಾರವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಾರ್ಚ್ 28ರಂದು ಮೇಣದ ಪ್ರತಿಮೆ ಉದ್ಘಾಟನೆ ಮಾಡಲು ನಟನ ಆಗಮನದ ವಿಚಾರವನ್ನು ಬಹಿರಂಗ ಪಡಿಸಿತ್ತು. ಇದೀಗ ಈ ವಿಚಾರ ಅವರ ಅಭಿಮಾನಿಗಳನ್ನು ಉಲ್ಲಾಸಭರಿತರನ್ನಾಗಿ ಮಾಡಿದೆ.