ಬಿಡುಗಡೆಗೆ ಎದುರು ನೋಡುತ್ತಿರುವ ಆ್ಯಕ್ಷನ್ ಥ್ರಿಲ್ಲರ್ 'ಪುಷ್ಪ 2: ದಿ ರೂಲ್' ತನ್ನ ಪ್ರಚಾರ ಪ್ರಾರಂಭಿಸಿದೆ. ಬಹುನಿರೀಕ್ಷಿತ ಚಿತ್ರದಲ್ಲಿ ಕನ್ನಡತಿ ಶ್ರೀಲೀಲಾ ಸ್ಪೆಷಲ್ ಸಾಂಗ್ನಲ್ಲಿ ಸೊಂಟ ಬಳುಕಿಸಿದ್ದು, ನಾಳೆ ಸಂಜೆ ಹಾಡು ಅನಾವರಣಗೊಳ್ಳಲಿದೆ. ಪ್ರೇಕ್ಷಕರು ಕಾತರರಾಗಿರುವ ಹೊತ್ತಲ್ಲಿ ಚಿತ್ರತಂಡ ಹಾಡಿನ ಪ್ರೋಮೋ ಅನಾವರಣಗೊಳಿಸುವ ಮೂಲಕ ಅವರ ಕುತೂಹಲವನ್ನು ದುಪ್ಪಟ್ಟುಗೊಳಿಸಿದ್ದಾರೆ.
ಸುಕುಮಾರ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ. ಡಿಸೆಂಬರ್ 5ರಂದು ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದ್ದು, ಪ್ರಚಾರ ಆರಂಭವಾಗಿದೆ. ಚಿತ್ರದಲ್ಲಿ ಕನ್ನಡದ ಮತ್ತೋರ್ವ ನಟಿ ಶ್ರೀಲೀಲಾ 'ಕಿಸ್ಸಿಕ್' ಎಂಬ ಸ್ಪೆಷಲ್ ಸಾಂಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ 24ರಂದು ಅಂದರೆ ಭಾನುವಾರ ಸಂಜೆ ಹಾಡನ್ನು ಬಿಡುಗಡೆಗೊಳಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇಂದು ಹಾಡಿನ ಪ್ರೋಮೋ ಬಿಡುಗಡೆಯಾಗಿದೆ.
ಅಲ್ಲು ಅರ್ಜುನ್ - ಸುಕುಮಾರ್ - ದೇವಿ ಶ್ರೀಪ್ರಸಾದ್ ಅವರ ಕಾಂಬಿನೇಶನ್ ಸಿನಿಪ್ರಿಯರ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈ ಹಿಂದಿನ ಸಿನಿಮಾಗಳಲ್ಲಿನ ವಿಶೇಷ ಹಾಡುಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶ ಕಂಡಿವೆ. ಕೇಳುಗರನ್ನು ಮತ್ತಷ್ಟು ಉತ್ಸಾಹಗೊಳಿಸುತ್ತವೆ ಎಂಬುದು ಅನೇಕರ ಮೆಚ್ಚುಗೆಯ ಮಾತು. ಅದರಂತೆ ಇದೀಗ ಪುಷ್ಪ 2: ದಿ ರೂಲ್ನಲ್ಲಿ ಬಹುಭಾಷಾ ಸಿನಿಮಾಗಳಲ್ಲಿ ಬ್ಯಸಿಯಾಗಿರುವ ಶ್ರೀಲೀಲಾ ಅವರ 'ಕಿಸ್ಸಿಕ್' ಎಂಬ ಹಾಡು ಸಿದ್ಧಗೊಂಡಿದೆ. ಇದು ನವೆಂಬರ್ 24, ಅಂದರೆ ನಾಳೆ ಸಂಜೆ 7 ಗಂಟೆ 2 ನಿಮಿಷಕ್ಕೆ ಬಿಡುಗಡೆ ಆಗಲಿದೆ. ಈ ಹಿನ್ನೆಲೆ ಚಿತ್ರತಂಡ 'ಕಿಸ್ಸಿಕ್' ಪ್ರೋಮೋವನ್ನು ಅನಾವರಣಗೊಳಿಸಿದ್ದಾರೆ. ಇದು ಹಾಡನ್ನು ಆನಂದಿಸುವ ವೀಕ್ಷಕರ ಉತ್ಸಾಹವನ್ನು ಹೆಚ್ಚಿಸಿದೆ.