''ಟಾಕ್ಸಿಕ್'', ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ. ಕೆಜಿಎಫ್ 2 ನಂತರ ಹಾಗೂ 2 ವರ್ಷಗಳ ಬ್ರೇಕ್ ಬಳಿಕ ಅಭಿನಯಿಸುತ್ತಿರುವ ಚಿತ್ರ. ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಹಾಗೂ ಕನ್ನಡದ ಪತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರಕ್ಕೀಗ ಸಂಕಷ್ಟ ಎದುರಾಗಿದೆ.
ಹೈಕೋರ್ಟ್ ನೋಟಿಸ್: ಸಿನಿಮಾ ಸೆಟ್ ಸಂಬಂಧ ನಿರ್ಮಾಣ ಸಂಸ್ಥೆಗೆ ಹೈಕೋರ್ಟ್ ನೋಟಿಸ್ ನೀಡಿದೆ. ಅರಣ್ಯ ಭೂಮಿಯಲ್ಲಿ 'ಟಾಕ್ಸಿಕ್' ತಂಡ ದೊಡ್ಡ ಮಟ್ಟದ ಸೆಟ್ ಹಾಕುತ್ತಿರುವುದಾಗಿ ಆರೋಪಿಸಿ ವಕೀಲರಾದ ಜಿ. ಬಾಲಾಜಿ ಅವರು ಪಿಐಎಲ್ ಸಲ್ಲಿಸಿದ್ದರು. ಜೊತೆಗೆ ಸೆಟ್ ಅನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಈ ಪಿಐಎಲ್ ಸಂಬಂಧ ಹೈಕೋರ್ಟ್ ಕೆವಿಎನ್ ಸಂಸ್ಥೆ ಹಾಗೂ ಹೆಚ್ಎಂಟಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ವಕೀಲ ಜಿ. ಬಾಲಾಜಿ ಹೇಳುವುದೇನು?ಈ ಸಂಬಂಧ ವಕೀಲ ಜಿ. ಬಾಲಾಜಿ ಅವರು ಈಟಿವಿ ಭಾರತದ ಜೊತೆ ಮಾತನಾಡಿದ್ದು, ''ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ 20 ಎಕರೆ ಜಾಗದಲ್ಲಿ (ಅರಣ್ಯ ಭೂಮಿಯಲ್ಲಿ) ಅನಧಿಕೃತವಾಗಿ ಸೆಟ್ ನಿರ್ಮಾಣ ಮಾಡಲಾಗಿದೆ. ಕೂಡಲೇ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಈ ಸೆಟ್ ಅನ್ನು ತೆರವುಗೊಳಿಸಲು ಕೋರ್ಟ್ಗೆ ಮನವಿ ಮಾಡಲಾಗಿದೆ. ಈ ಸಂಬಂಧ ವಿಚಾರಣೆಯನ್ನು ಸಿಜೆ ಎನ್.ವಿ.ಅಂಜಾರಿಯಾ, ನ್ಯಾ. ಕೆ.ವಿ.ಅರವಿಂದ್ ಅವರಿದ್ದ ಹೈಕೋರ್ಟ್ ಪೀಠ ಆಗಸ್ಟ್ 19ಕ್ಕೆ ಮುಂದೂಡಿದೆ. ಇನ್ನು ಹೆಚ್ಎಂಟಿ ಸಂಸ್ಥೆ ಈ ಭೂಮಿಯನ್ನು ಕೆನರಾ ಬ್ಯಾಂಕ್ಗೆ ಮಾರಾಟ ಮಾಡಿತ್ತು. ಕೆನರಾ ಬ್ಯಾಂಕ್, ಕೆವಿಎನ್ ಸಿನಿಮಾ ನಿರ್ಮಾಣ ಸಂಸ್ಥೆಗೆ ನೀಡಿದೆ'' ಎಂಬುದು ವಕೀಲ ಬಾಲಾಜಿ ಅವರ ಆರೋಪವಾಗಿದೆ.
ಕೆವಿಎನ್ ಸಂಸ್ಥೆ ಪ್ರತಿಕ್ರಿಯೆ:ನೋಟಿಸ್ ಬಗ್ಗೆ ಕೆವಿಎನ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಅವರನ್ನು ಕೇಳಿದ್ರೆ, ''ಸೆಟ್ ಹಾಕಿರುವುದು ಹೆಚ್ಎಂಟಿಗೆ ಸೇರಿದ ಜಾಗದ ಪಕ್ಕದ ಜಾಗದಲ್ಲಿ. ಇನ್ನೂ ಶೂಟಿಂಗ್ ಶುರುವಾಗಿಲ್ಲ. ಸೆಟ್ ನಿರ್ಮಾಣದ ಕೆಲಸಗಳು ನಡೆಯುತ್ತಿದೆ. ಸೆಟ್ ಹಾಕುತ್ತಿರುವ ಜಾಗ ನಮ್ಮ ಆತ್ಮೀಯರದ್ದೇ. ನೋಟಿಸ್ ಆಫೀಸ್‌ಗೆ ಬಂದಿರಬಹುದು ಅಥವಾ ಜಾಗದ ಮಾಲೀಕರಿಗೆ ಹೋಗಿರಬಹುದು'' ಎಂದು ಹೇಳಿದರು.