'ಉತ್ತರಕಾಂಡ' ಮುಹೂರ್ತದಿಂದ ಹಿಡಿದು ಸ್ಟಾರ್ ಕಾಸ್ಟ್ ವಿಚಾರವಾಗಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿರುವ ಚಿತ್ರ. ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ದುನಿಯಾ ವಿಜಯ್, ದಿಗಂತ್, ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಹೆಸರಾಂತ ತಾರೆಯರಿದ್ದಾರೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯಾ ರಾಜೇಶ್ ಈ 'ಉತ್ತರಕಾಂಡ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ.
ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿರುವ 'ಉತ್ತರಕಾಂಡ' ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿರುವ ಧನಂಜಯ್ ಅವರ ಜೋಡಿಯಾಗಿ ಐಶ್ವರ್ಯಾ ರಾಜೇಶ್ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದಲ್ಲಿ 'ದುರ್ಗಿ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದಿ ಗ್ರೇಟ್ ಇಂಡಿಯನ್ ಕಿಚನ್, ದಿ ವರ್ಲ್ಡ್ ಫೇಮಸ್ ಲವರ್, ವಡಾ ಚೆನ್ನೈ, ಕಾಕ ಮುತ್ತೈ (ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ), ಜೋಮೋಂಟೆ ಸುವಿಶೇಷಂಗಳ್, ಟಕ್ ಜಗದೀಶ್ ವಾನಂ ಕೊಟ್ಟಾಟುಂ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಐಶ್ವರ್ಯಾ ತಮ್ಮ ಉತ್ತಮ ಅಭಿನಯದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ಇದೀಗ ಕನ್ನಡದ ಉತ್ತರಕಾಂಡಕ್ಕೆ ಎಂಟ್ರಿ ನೀಡಿದ್ದಾರೆ.
ಪ್ರಸ್ತುತ ಪ್ರಥಮ ಶೆಡ್ಯೂಲ್ನ ಚಿತ್ರೀಕರಣ ವಿಜಯಪುರದಲ್ಲಿ ನಡೆಯುತ್ತಿದೆ. ಈ ಆ್ಯಕ್ಷನ್ ಡ್ರಾಮಾಗೆ ರೋಹಿತ್ ಪದಕಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಧನಂಜಯ್ ಜೊತೆಗೆ ಶಿವಣ್ಣ ಸೇರಿದಂತೆ ಮಲಯಾಳಂ ನಟ ವಿಜಯ್ ಬಾಬು, ರಂಗಾಯಣ ರಘು, ಚೈತ್ರ ಜೆ ಆಚಾರ್, ಉಮಾಶ್ರೀ, ಯೋಗರಾಜ್ ಭಟ್, ದಿಗಂತ್ ಮಂಚಾಲೆ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಬಹು ದೊಡ್ಡ ತಾರಾಬಳಗವಿದೆ.