ಹೈದರಾಬಾದ್: ಭಾರತೀಯ ಚಿತ್ರರಂಗದ ಜನಪ್ರಿಯ ತಾರಾ ದಂಪತಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರಾ? ಎಂಬ ವದಂತಿಗಳು ಬಹಳ ದಿನಗಳಿಂದ ಇವೆ. ಆದ್ರೆ ಸೆಲೆಬ್ರಿಟಿ ಕಪಲ್ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಸುಖಸಂಸಾರ ಸಾಗಿಸುತ್ತಿದ್ದಾರೆ. ವಿಚ್ಛೇದನ ಊಹಾಪೋಹಗಳ ನಡುವೆ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ತಮ್ಮ ವೆಡ್ಡಿಂಗ್ ರಿಂಗ್ ಧರಿಸಿ ಕಾಣಿಸಿಕೊಂಡರು. ಈ ಮೂಲಕ ಪತಿ ಅಭಿಷೇಕ್ ಬಚ್ಚನ್ ಅವರೊಂದಿಗಿನ ಸಂಬಂಧದ ಸುತ್ತಲಿರುವ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟರು.
ಈ ಊಹಾಪೋಹಗಳು ನಿನ್ನೆ ಮೊನ್ನೆಯದ್ದಲ್ಲ. ಹಲವು ತಿಂಗಳಿನಿಂದ ಕೇಳಿಬರುತ್ತಿದೆ. ಅದರಲ್ಲೂ ಇತ್ತೀಚೆಗಷ್ಟೇ ಐಶ್ವರ್ಯಾ ಸೈಮಾ 2024 ಕಾರ್ಯಕ್ರಮದಲ್ಲಿ ಉಂಗುರವಿಲ್ಲದೇ ಕಾಣಿಸಿಕೊಂಡ ನಂತರ ವದಂತಿಗಳು ಉಲ್ಭಣಗೊಂಡಿದ್ದವು. ಸಮಾರಂಭದಲ್ಲಿ ಮಗಳು ಆರಾಧ್ಯ ಅವರೊಂದಿಗೆ ಕಾಣಿಸಿಕೊಂಡಿದ್ದು, ಅಭಿಷೇಕ್ ಜೊತೆಗಿರಲಿಲ್ಲ. ಐಶ್ವರ್ಯಾ ಅದೆಲ್ಲೇ ಹೋಗಲಿ, ಹೆಚ್ಚಾಗಿ ವೆಡ್ಡಿಂಗ್ ರಿಂಗ್ ಧರಿಸಿರುತ್ತಾರೆ. ಆದ್ರೆ ಇತ್ತೀಚಿನ ಕಾರ್ಯಕ್ರಮಕ್ಕೆ ಉಂಗರವಿಲ್ಲದೇ ಬಂದಿದ್ದು, ವದಂತಿಗೆ ಪುಷ್ಟಿ ನೀಡಿತ್ತು.
ಇದೀಗ ಪ್ಯಾರಿಸ್ ಫ್ಯಾಷನ್ ಈವೆಂಟ್‌ನಲ್ಲಿ ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ. ಉಂಗುರ, ತಾರಾ ದಂಪತಿಯ ವೈವಾಹಿಕ ಜೀವನದ ಕುರಿತ ಚರ್ಚೆ ಸೃಷ್ಟಿಸಿದೆ. ದಂಪತಿ ಸಾರ್ವಜನಿಕವಾಗಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿರುವುದು ಊಹಾಪೋಹಗಳ ಉಲ್ಬಣಕ್ಕೆ ಪ್ರಮುಖ ಕಾರಣ. ಈ ವರ್ಷಾರಂಭದಲ್ಲಿ ಅಂಬಾನಿ ವಿವಾಹದಲ್ಲಿ ಸಂಪೂರ್ಣ ಬಚ್ಚನ್ ಕುಟುಂಬ ಭಾಗವಹಿಸಿತ್ತು. ಆದ್ರೆ ಐಶ್ವರ್ಯಾ ಮತ್ತು ಆರಾಧ್ಯ ಪ್ರತ್ಯೇಕವಾಗಿ ಆಗಮಿಸಿದ್ದರು. ಇದು ವದಂತಿಗಳಿಗೆ ಮತ್ತಷ್ಟು ಇಂಬು ನೀಡಿತ್ತು.
2007ರಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ಐಶ್ ಮತ್ತು ಅಭಿ ತಮ್ಮ ಖಾಸಗಿ ಜೀವನವನ್ನು ಸಾರ್ವಜನಿಕ ಗಮನದಿಂದ ದೂರವಿಟ್ಟಿದ್ದಾರೆ. ವಾರ್ಷಿಕೋತ್ಸವ ಮತ್ತು ಜನ್ಮದಿನ ಸೇರಿದಂತೆ ವಿಶೇಷ ಸಂದರ್ಭಗಳಷ್ಟೇ ಕೆಲ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಊಹಾಪೋಹಗಳ ಹೊರತಾಗಿಯೂ, ಐಶ್ವರ್ಯಾ ಮತ್ತು ಅಭಿಷೇಕ್ ಇಬ್ಬರೂ ಮೌನ ವಹಿಸಿದ್ದಾರೆ. ಈ ಬಗ್ಗೆ ಇನ್ನೂ ಯಾವುದೇ ರೀತಿಯಲ್ಲಿ ಬಹಿರಂಗ ಹೇಳಿಕೆಯನ್ನು ನೀಡಿಲ್ಲ.