ಭಾರತದ ಅತ್ಯಂತ ಜನಪ್ರಿಯ ತಾರಾ ದಂಪತಿ ಐಶ್ವರ್ಯಾ-ಅಭಿಷೇಕ್ ಬೇರ್ಪಡುವ ಬಗೆಗಿನ ವದಂತಿಗಳು ನಿನ್ನೆ ಮೊನ್ನೆಯದ್ದಲ್ಲ. ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ಊಹಾಪೋಹ ಬಹಳ ದಿನಗಳಿಂದಲೂ ಇದೆ. ಹಲವು ವದಂತಿಗಳ ನಡುವೆ ದುಬೈನಲ್ಲಿ ನಡೆದ ಹೈ ಪ್ರೊಫೈಲ್ ಈವೆಂಟ್ ಒಂದರಲ್ಲಿ ಬಾಲಿವುಡ್ ಐಕಾನ್ ಐಶ್ವರ್ಯಾ ರೈ ಕಾಣಿಸಿಕೊಂಡಿದ್ದು, ಸ್ಕ್ರೀನ್ ಮೇಲೆ ಅವರ ಹೆಸರನ್ನು 'ಬಚ್ಚನ್' ಎಂಬ ಸರ್ನೇಮ್ ಇಲ್ಲದೇ ಪ್ರದರ್ಶಿಸಲಾಯಿತು.
ಗ್ಲೋಬಲ್ ವುಮೆನ್ಸ್ ಫೋರಮ್‌ನಲ್ಲಿ ಭಾಗವಹಿಸಿದ್ದ ನಟಿ, ಪ್ರಭಾವಿ ಮಹಿಳೆಯರ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಾವೀನ್ಯತೆ, ನಿರ್ಣಯ ಮತ್ತು ಸ್ಥಿತಿಸ್ಥಾಪಕತ್ವದಂತಹ ಪ್ರಮುಖ ವಿಷಯಗಳನ್ನು ಪ್ರೋತ್ಸಾಹಿಸಿದರು. ಆದಾಗ್ಯೂ, ನಟಿ ಕಾಣಿಸಿಕೊಂಡಾಗ ಪರದೆ ಮೇಲೆ ಬಂದ ಅವರ ಹೆಸರು ಸೋಷಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆಯಿತು. ಸರಳವಾಗಿ 'ಐಶ್ವರ್ಯಾ ರೈ - ಇಂಟರ್ನ್ಯಾಷನಲ್ ಸ್ಟಾರ್' ಎಂದು ಬರೆಯಲಾಗಿತ್ತು. 'ಬಚ್ಚನ್' ಸರ್ನೇಮ್ ಇಲ್ಲದೇ ಮಾಜಿ ವಿಶ್ವಸುಂದರಿಯ ಹೆಸರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐಶ್-ಅಭಿ ಡಿವೋರ್ಸ್ ರೂಮರ್ಸ್ ಉಲ್ಭಣಿಸಿದೆ.
ಈವೆಂಟ್‌ನ ವಿಡಿಯೋಗಳನ್ನು ದುಬೈ ವುಮೆನ್ ಎಸ್ಟಾಬ್ಲಿಷ್‌ಮೆಂಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಡ್ನಲ್ಲಿ ಹಂಚಿಕೊಳ್ಳಲಾಗಿದೆ. ಅತಿಲೋಕ ಸುಂದರಿ ಬೆರಗುಗೊಳಿಸುವ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲ್ಯೂ ಬ್ಯೂಟಿಫುಲ್ ಔಟ್ಫಿಟ್ನಲ್ಲಿದ್ದ ಅವರು ತಮ್ಮ ಮಾತುಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದರು.
ವಿಡಿಯೋದಲ್ಲಿ ಚೆಲುವೆಯ ಹೆಸರನ್ನು 'ಐಶ್ವರ್ಯಾ ರೈ - ಅಂತಾರಾಷ್ಟ್ರೀಯ ತಾರೆ' ಎಂದು ತೋರಿಸಲಾಗಿದ್ದು, ಇದೀಗ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. 2007ರಲ್ಲಿ ನಟ ಅಭಿಷೇಕ್ ಬಚ್ಚನ್ ಜೊತೆ ಹಸೆಮಣೆ ಏರಿದ ಬಳಿಕ ಅವರ ಹೆಸರು 'ಐಶ್ವರ್ಯಾ ರೈ ಬಚ್ಚನ್' ಎಂದು ಉಲ್ಲೇಖಿಸಲಾಗುತ್ತಿತ್ತು. ಆದ್ರೀಗ ಕೇವಲ 'ಐಶ್ವರ್ಯಾ ರೈ' ಎಂದಿದ್ದು, ಅವರ ಸಂಬಂಧದ ಸುತ್ತಲಿನ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿವೆ.