ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಇಂದಿಗೆ ಮೂರು ವರ್ಷ. 2021ರ ಅಕ್ಟೋಬರ್ 29ರಂದು ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದ ಅಪ್ಪು ಅವರನ್ನು ನೆನೆದು ಇಂದಿಗೂ ಅದೆಷ್ಟೋ ಮಂದಿ ಕಣ್ಣೀರಿಡುತ್ತಿದ್ದಾರೆ. ಅವರ ಮೂರನೇ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದ್ದು, ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ ಅನುಶ್ರೀ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪಾಪ್ಯುಲರ್ ಹೋಸ್ಟ್ ಅನುಶ್ರೀ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.. ''ನಮ್ಮ ಕಂಗಳ ಬಿಸಿಯ ಹನಿಗಳು ನೂರು ಬಾರಿ ಕೂಗಿದೆ.. ನಿಮ್ಮ ನಗುವ ಮೊಗವ ನೋಡಲು ಕೋಟಿ ಕಂಗಳು ಕಾಯುತ್ತಿದೆ!!! ಮಿಸ್ ಯೂ ಸರ್. ನೀವಿಲ್ಲದೇ ಅಭಿಮಾನ ಇಲ್ಲ, ನೀವಿಲ್ಲದೇ ಅಭಿಮಾನಕ್ಕೆ ಬೆಲೆ ಇಲ್ಲ.. ನೀವಿಲ್ಲದ ಬದುಕಿಗೆ ಕಳೆ ಇಲ್ಲ'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಲವ್ ಯೂ ಅಪ್ಪು ಸರ್ ಫಾರೆವರ್ ಆ್ಯಂಡ್ ಎವರ್, ವಿ ಮಿಸ್ ಯೂ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹೊಂದಿರುವ ನಿರೂಪಕಿ ಅನುಶ್ರೀ ಅವರು ರಾಜ್ ಕುಟುಂಬದ ವಿಶೇಷವಾಗಿ ಅಪ್ಪು ಅವರ ಅಪ್ಪಟ ಅಭಿಮಾನಿ. ಬದುಕಿದ್ದ ಸಂದರ್ಭ ಅವರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಗ್ಗೆ ಸಾಕಷ್ಟು ಗುಣಗಾನ ಮಾಡಿದ್ದಾರೆ. ಅವರ ಅಗಲಿಕೆ ಇಂದಿಗೂ ಅನುಶ್ರೀ ಅವರನ್ನು ಕಾಡುತ್ತಿದೆ. ನಿಧನದ ನಂತರವೂ ಅನೇಕ ಕಾರ್ಯಕ್ರಮಗಳಲ್ಲಿ ಪುನೀತ್ ಅವರನ್ನು ಸ್ಮರಿಸಿ ಕಣ್ಣೀರಾಗಿದ್ದಾರೆ. ಇದೀಗ ಅವರ ಭಾವನಾತ್ಮಕ ಪೋಸ್ಟ್ ಕಂಡ ಅಭಿಮಾನಿಗಳು ಸಹ ಕಣ್ಣೀರು ಹಾಕಿದ್ದಾರೆ.