ಕಳೆದ ವರ್ಷಾರಂಭದಲ್ಲಿ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಅವರನ್ನು ಮದುವೆಯಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಟ್ರೋಲಿಂಗ್ ಎದುರಿಸಿದ್ದರು. ಇದೀಗ ಅವರು, ಭಾರತದಲ್ಲಿ ಅಂತರ್ಧರ್ಮೀಯ ದಂಪತಿ ಸಾಕಷ್ಟು ಟೀಕೆಗೆ ಒಳಗಾಗುತ್ತಾರೆ ಎಂದು ಹೇಳಿದ್ದಾರೆ. ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಜೂನ್ 23ರಂದು ಮದುವೆಯಾಗಲಿದ್ದು, ಸ್ವರಾ ಭಾಸ್ಕರ್ ಅಂತರ್ಧರ್ಮೀಯ ಮದುವೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ಲವ್ ಜಿಹಾದ್ ಪರಿಕಲ್ಪನೆ ಆಧುನಿಕ ಭಾರತದಲ್ಲಿ ಪ್ರಚಲಿತದಲ್ಲಿರುವ ವಿಷಯ ಎಂದು ವಿಷಾದಿಸಿದರು. ಅಂತರ್ಧರ್ಮೀಯ ಜೋಡಿಗಳು ಟೀಕೆಗೊಳಗಾಗುತ್ತಾರೆ, ಪ್ರೇಮಿಗಳ ದಿನದಂದೂ ಸಹ ಅವರ ಮೇಲೆ ಹಲ್ಲೆಗಳಾಗುತ್ತವೆ ಎಂದರು.
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ, ''ಇಬ್ಬರು ವಯಸ್ಕರ ಖಾಸಗಿ ಜೀವನದ ವಿಚಾರಗಳಲ್ಲಿ ಹೊರಗಿನವರ ಅಭಿಪ್ರಾಯಗಳು ಅನಗತ್ಯ. ರಿಜಿಸ್ಟರ್ ಮ್ಯಾರೇಜ್, ನಿಕಾಹ್ ಅಥವಾ ಆರ್ಯ ಸಮಾಜ ಸಂಪ್ರದಾಯದಲ್ಲಿ ಮದುವೆಯಾಗುವ ನಿರ್ಧಾರವು ಅವರವರ ವೈಯಕ್ತಿಕ ಆಯ್ಕೆಯಾಗಿದ್ದು, ಅದನ್ನು ಗೌರವಿಸಬೇಕು. ಇದು ಪುರುಷ-ಮಹಿಳೆ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ವಿಚಾರ. ಇದು ಸೋನಾಕ್ಷಿ ಅವರ ಜೀವನ. ನಟಿ ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ. ಅವರ ಸಂಗಾತಿ ನಟಿಯನ್ನು ತಮ್ಮ ಜೀವನಕ್ಕೆ ಆರಿಸಿದ್ದಾರೆ. ಸದ್ಯ ಈ ವಿಚಾರ ಅವರ ಮತ್ತು ಅವರ ಕುಟುಂಬಗಳಿಗೆ ಸಂಬಂಧಿಸಿದ್ದು. ಇದು ಸಮಯ ವ್ಯರ್ಥ ವಾಡುವಂತಹ ಚರ್ಚೆ ಎಂದು ನನಗನಿಸುತ್ತಿದೆ" ಎಂದು ತಿಳಿಸಿದರು.