ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಸ್ಯಾಂಡಲ್ವುಡ್ನಿಂದ ಟಾಲಿವುಡ್, ಟಾಲಿವುಡ್ನಿಂದ ಬಾಲಿವುಡ್.... ಹೀಗೆ ಒಂದಾದ ಬಳಿಕ ಒಂದರಂತೆ ಬಹುಭಾಷೆಗಳಲ್ಲಿ ಸರಣಿ ಸಿನಿಮಾಗಳನ್ನು ಮಾಡುತ್ತಾ ತಮ್ಮ ವೃತ್ತಿಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ ಈ ಕನ್ನಡತಿ. ಕಳೆದ ವರ್ಷ ಹಿಂದಿ ಚಿತ್ರರಂಗದ 'ಅನಿಮಲ್' ಚಿತ್ರದ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ಪ್ರಸ್ತುತ ನಟಿಯ ಕೈಯಲ್ಲಿ ಹಲವು ಬಹುನಿರೀಕ್ಷಿತ ಪ್ರಾಜೆಕ್ಟ್‌ಗಳಿವೆ. ಸಿನಿಮಾ ಯಶಸ್ಸಿನ ಜೊತೆಗೆ ವೈಯಕ್ತಿಕ ವಿಚಾರಗಳಿಂದಲೂ ಇವರು ಸಾಕಷ್ಟು ಸುದ್ದಿಯಲ್ಲಿರುತ್ತಾರೆ.
ನಾವೀಗ ಹೇಳ ಹೊರಟಿರುವುದು ಅವರ ಲವ್ ಲೈಫ್ ಬಗ್ಗೆ. ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಅವರ ಜೊತೆ ರಿಲೇಶನ್ಶಿಪ್ನಲ್ಲಿದ್ದಾರೆ ಎಂಬ ಮಾತುಗಳು ಕೆಲ ವರ್ಷಗಳಿಂದಲೂ ಇದೆ. ಇವರಿಬ್ಬರೂ ಒಟ್ಟಿಗೆ ಸಮಯ ಕಳೆದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಾಕಷ್ಟು ಚರ್ಚೆಯಾಗುತ್ತವೆ. ಆದಾಗ್ಯೂ, ಈವರೆಗೆ ನೇರವಾಗಿ ತಮ್ಮ ಪ್ರೀತಿಯನ್ನು ಎಲ್ಲೂ ಒಪ್ಪಿಕೊಂಡಿಲ್ಲ.
ಆದ್ರೆ, ಇತ್ತೀಚೆಗೆ ರಶ್ಮಿಕಾ ಮಂದಣ್ಣ ತಮ್ಮ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿಜಯ್ ಕೂಡಾ ಕೆಲ ದಿನಗಳ ಹಿಂದಷ್ಟೇ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ದರು. ಇದೀಗ ಭಾನುವಾರ ಸಂಜೆ ಚೆನ್ನೈನಲ್ಲಿ ನಡೆದ ಅದ್ಧೂರಿ 'ಪುಷ್ಪ' ಪ್ರಮೋಶನ್ ಈವೆಂಟ್ನಲ್ಲಿ ನಟಿ ಮದುವೆ, ಪ್ರಿಯತಮನ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ:ನಾನು ಸಿಂಗಲ್ ಆಗಿರುತ್ತೇನೆಂದು ಅನಿಸುತ್ತದೆಯೇ? ಲವ್ ಲೈಫ್ ಬಗ್ಗೆ ಬಾಯ್ಬಿಟ್ಟ ವಿಜಯ್ ದೇವರಕೊಂಡ
ಹೌದು, ಕಳೆದ ಸಂಜೆ ಬಹುನಿರೀಕ್ಷಿತ ಚಿತ್ರದ ಕಿಸ್ಸಿಕ್ ಸಾಂಗ್ ಅನಾವರಣಗೊಂಡಿತು. ವೇದಿಕೆಯಲ್ಲಿ 'ಪುಷ್ಪ' ನನ್ನ ಜೀವನವನ್ನೇ ಬದಲಿಸಿದ ಚಿತ್ರ ಎಂದು ಕೃತಜ್ಞತೆ ಸಲ್ಲಿಸಿದರು. ನಂತರ, ನಟಿಗೆ ಮದುವೆ, ಹುಡುಗನ ಬಗ್ಗೆ ಪ್ರಶ್ನೆಗಳು ಹರಿದುಬಂದವು. "ನೀವು ಸಿನಿಮಾ ಇಂಡಸ್ಟ್ರಿಯವರನ್ನೇ ಮದುವೆಯಾಗಲು ಬಯಸುವಿರಾ? ಅಥವಾ ಹೊರಗಿನ ವ್ಯಕ್ತಿಯೇ?" ಎಂದು ಕೇಳಲಾಯಿತು. ಇದಕ್ಕೆ ನಾಚಿ ನೀರಾದ ರಶ್ಮಿಕಾ, ''ಇದಕ್ಕೆ ಉತ್ತರ ಎಲ್ಲರಿಗೂ ಗೊತ್ತಿದೆ'' ಎಂದು ತಿಳಿಸಿದರು. ಈ ಉತ್ತರ ನೀಡುವಾಗ ನಟಿ ಮೊಗದಲ್ಲಿದ್ದ ನಗು, ನಾಚಿಕೆ ಸಮಾರಂಭದ ವಿಶೇಷ ಆಕರ್ಷಣೆಯಾಗಿತ್ತು. ರಶ್ಮಿಕಾ ಉತ್ತರಕ್ಕೆ ಅಲ್ಲೇ ಕುಳಿತಿದ್ದ ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಕೂಡ ನಕ್ಕರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ಇದನ್ನೂ ಓದಿ:ಸಮಂತಾ ಜಾಗಕ್ಕೆ ಶ್ರೀಲೀಲಾ: ಅಂದು 'ಊ ಅಂಟಾವಾ' ಇಂದು 'ಕಿಸ್ಸಿಕ್'; ಅಲ್ಲು ಅರ್ಜುನ್ ಜೊತೆ ಮಸ್ತ್ ಡ್ಯಾನ್ಸ್
2021ರ ಕೊನೆಗೆ ತೆರೆಕಂಡು ಬ್ಲಾಕ್ಬಸ್ಟರ್ ಹಿಟ್ ಆದ ''ಪುಷ್ಪ: ದಿ ರೈಸ್'' ಚಿತ್ರದ ಮುಂದುವರಿದ ಭಾಗ 'ಪುಷ್ಪ 2: ದಿ ರೂಲ್' ಬಿಡುಗಡೆ ಹೊಸ್ತಿಲಿನಲ್ಲಿದೆ. ಡಿಸೆಂಬರ್ 5ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿರುವ ಬಹುನಿರೀಕ್ಷಿತ ಚಿತ್ರ ಪ್ರಚಾರ ಕಾರ್ಯ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಅದರ ಭಾಗವಾಗಿ ಕಳೆದ ಸಂಜೆ ಕಿಸ್ಸಿಕ್ ಸಾಂಗ್ ರಿಲೀಸ್ ಈವೆಂಟ್ ಜರುಗಿತು. ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಅಭಿನಯದ ಹಾಡು ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಸಿನಿಮಾ ವೀಕ್ಷಿಸಲು ಅಪಾರ ಸಂಖ್ಯೆಯ ಸಿನಿಪ್ರಿಯರು ಉತ್ಸುಕರಾಗಿದ್ದಾರೆ.