ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಸುತ್ತ ಸುತ್ತುವರೆದಿದೆ. ಇದೀಗ ತಾವು ರಿಲೇಶನ್ಶಿಪ್ನಲ್ಲಿರುವುದಾಗಿ ದೃಢಪಡಿಸಿದ್ದಾರೆ. ಅದಾಗ್ಯೂ, ತಮ್ಮ ಪಾರ್ಟ್ನರ್ ಹೆಸರನ್ನು ಬಹಿರಂಗಪಡಿಸಿಲ್ಲ.
ಇತ್ತೀಚೆಗೆ ಮಾಧ್ಯಮವೊಂದರೊಂದಿಗೆ ಮಾತನಾಡುವ ವೇಳೆ, ರಶ್ಮಿಕಾ ತಮ್ಮ ಜೀವನದ ಬಗ್ಗೆ ಹಂಚಿಕೊಂಡರು. ಸಂಗಾತಿಯಲ್ಲಿ ತಾವು ಇಷ್ಟಪಡುವ ಗುಣಗಳು ಮತ್ತು ವೈಯಕ್ತಿಕ ಸಂಬಂಧಗಳೊಂದಿಗೆ ವೃತ್ತಿಜೀವನದ ಖ್ಯಾತಿಯನ್ನು ಬ್ಯಾಲೆನ್ಸ್ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ.
ತಮ್ಮ ''ಹ್ಯಾಪಿ ಪ್ಲೇಸ್'' ಬಗ್ಗೆ ಮಾತನಾಡಿದ ರಶ್ಮಿಕಾ, "ಮನೆ ನನ್ನ ಸಂತೋಷದ ಸ್ಥಳ. ಯಶಸ್ಸು ಬರಬಹುದು, ಹಾಗೇ ಹೋಗಬಹುದು. ಆದ್ರೆ ಮನೆ ಶಾಶ್ವತ. ನಾನು ಆ ಸ್ಥಳದಿಂದ ಕೆಲಸ ಮಾಡುತ್ತೇನೆ. ನನಗೆ ಸಿಗುವ ಖ್ಯಾತಿಯ ಹೊರತಾಗಿಯೂ, ನಾನಿನ್ನೂ ಓರ್ವ ಮಗಳು, ಸಹೋದರಿ ಮತ್ತು ಸಂಗಾತಿ. ನನ್ನ ಆ ವೈಯಕ್ತಿಕ ಜೀವನವನ್ನು ನಿಜವಾಗಿಯೂ ಗೌರವಿಸುತ್ತೇನೆ. ನಾನೀಗ ಎರಡೂ ಪ್ರಪಂಚಗಳಲ್ಲಿ (ವೈಯಕ್ತಿಕ ಮತ್ತು ವೃತ್ತಿಜೀವನ) ಅತ್ಯುತ್ತಮವಾಗಿ ಜೀವಿಸುತ್ತಿದ್ದೇನೆ. ನಾನು ನನ್ನ ಸ್ವಂತ ಜೀವನದೊಂದಿಗೆ ಈ ವೈಯಕ್ತಿಕ ಜೀವನವನ್ನೂ ಕಾಪಾಡಿಕೊಳ್ಳುವ ವ್ಯಕ್ತಿ ಎಂದು ಹೇಳಲಿಚ್ಛಿಸುತ್ತೇನೆ" ಎಂದರು.
ಪುರುಷನಲ್ಲಿ ಯಾವ ಗುಣಗಳು ಆಕರ್ಷಕ ಎಂದೆನಿಸುತ್ತವೆ ಎಂಬ ಪ್ರಶ್ನೆ ರಶ್ಮಿಕಾರಿಗೆ ಎದುರಾದಾಗ, "ಕಣ್ಣುಗಳು ಆತ್ಮಕ್ಕೆ ಕಿಟಕಿ. ನಾನದರಲ್ಲಿ ನಂಬಿಕೆ ಇಡುತ್ತೇನೆ. ನಗುಮುಖ ಹೊಂದಿರುವ ಜನರು ನನಗೆ ಹಿಡಿಸುತ್ತಾರೆ. ಸಹಜವಾಗಿ, ಯಾರೇ ಇರಲಿ ತಮ್ಮ ಸುತ್ತಲಿನ ಜನರನ್ನು ಗೌರವಿಸುವ ವ್ಯಕ್ತಿ ನನಗೆ ಇಷ್ಟ ಆಗುತ್ತಾರೆ'' ಎಂದು ತಿಳಿಸಿದರು.