ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ತಮ್ಮ ಮುಂದಿನ ಬಹುನಿರೀಕ್ಷಿತ ಹಾಲಿವುಡ್ ಚಿತ್ರ 'ಹೆಡ್ಸ್ ಆಫ್ ಸ್ಟೇಟ್'ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಬಹುಬೇಡಿಕೆ ತಾರೆ ತಮ್ಮ ಅಭಿಮಾನಿಗಳೊಂದಿಗೆ ಸೊಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಶೂಟಿಂಗ್ ಕ್ಷಣಗಳು, ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಜೊತೆಗಿರುವ ಸೆಟ್‌ನಲ್ಲಿನ ಕ್ಷಣಗಳನ್ನು ಒಳಗೊಂಡಿರುವ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ಪ್ರಿಯಾಂಕಾ ಹಂಚಿಕೊಂಡಿರುವ ವಿಡಿಯೋ, ಪುಟ್ಟ ಮಗಳೊಂದಿಗಿನ ಉಲ್ಲಾಸಕರ ದೃಶ್ಯವನ್ನೂ ಒಳಗೊಂಡಂತೆ ಶೂಟಿಂಗ್ ಲೋಕೇಶನ್ನ ಕ್ಷಣಗಳನ್ನು ಒಳಗೊಂಡಿದೆ. ಪ್ರಿಯಾಂಕಾ ಶೂಟಿಂಗ್ಗೆ ರೆಡಿ ಆಗೋ ಸಂದರ್ಭ ಮಾಲ್ತಿ ತಾಯಿಯ ಮಡಿಲಲ್ಲಿ ಕುಳಿತಿರುವುದನ್ನೂ ಈ ವಿಡಿಯೋದಲ್ಲಿ ಕಾಣಬಹುದು. ತಾಯಿ ಮಗಳಿಬ್ಬರು ಕೋಲು ಹಿಡಿದು ಮೋಜು ಮಾಡುತ್ತಿರುವ ತಮಾಷೆಯ ಕ್ಷಣವನ್ನೂ ಸಹ ಈ ವಿಡಿಯೋ ಒಳಗೊಂಡಿದೆ.
ಇಲ್ಯಾ ನೈಶುಲ್ಲರ್ ಆ್ಯಕ್ಷನ್ ಕಟ್ ಹೇಳಿರುವ 'ಹೆಡ್ಸ್ ಆಫ್ ಸ್ಟೇಟ್'ನ ಪ್ರಮುಖ ಪಾತ್ರಗಳಲ್ಲಿ ಇದ್ರಿಸ್ ಎಲ್ಬಾ, ಜಾನ್ ಸೆನಾ ಮತ್ತು ಜ್ಯಾಕ್ ಕ್ವೈಡ್ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರಿಯಾಂಕಾ ಅವರು, ವೃತ್ತಿಪರತೆ ಮತ್ತು ಸೌಹಾರ್ದತೆಯನ್ನು ಶ್ಲಾಘಿಸಿ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸೋ ಜೊತೆಗೆ ಮೆಚ್ಚುಗೆ ಸೂಚಿಸಿದ್ದಾರೆ. "ಲೆಜೆಂಡ್ಸ್ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಗೌರವಕರ ಕ್ಷಣ" ಎಂಬುದನ್ನು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.