ಕರ್ನಾಟಕ

karnataka

ETV Bharat / entertainment

'ರಾಧಾ ರಮಣ' ನಟಿ ಪವಿತ್ರಾ ಜಯರಾಮ್ ರಸ್ತೆ ಅಪಘಾತದಲ್ಲಿ​ ದುರ್ಮರಣ - Pavitra Jayaram

'ರಾಧಾ ರಮಣ' ಧಾರಾವಾಹಿ ಖ್ಯಾತಿಯ ನಟಿ ಪವಿತ್ರಾ ಜಯರಾಮ್​​​ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Pavitra Jayaram died in Accident
ರಸ್ತೆ ಅಪಘಾತದಲ್ಲಿ ಪವಿತ್ರಾ ಜಯರಾಮ್ ದುರ್ಮರಣ ((ETV Bharat))

By ETV Bharat Karnataka Team

Published : May 12, 2024, 2:16 PM IST

ಮಹಬೂಬ್​ನಗರ: ತೆಲಂಗಾಣದ ಮಹಬೂಬ್‌ನಗರದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಕಿರುತೆರೆ ನಟಿ ಪವಿತ್ರಾ ಜಯರಾಮ್​​​ ಮೃತಪಟ್ಟಿದ್ದಾರೆ.

ಧಾರಾವಾಹಿಯೊಂದರ ಚಿತ್ರೀಕರಣ ಮುಗಿಸಿ ಬೆಂಗಳೂರಿನಿಂದ ಬರುತ್ತಿದ್ದಾಗ ಪವಿತ್ರಾ ಅವರಿದ್ದ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಆ ಬಳಿಕ ಬಸ್‌ಗೂ ಗುದ್ದಿದೆ. ಮಹಬೂಬ್‌ನಗರ ಜಿಲ್ಲೆಯ ಭೂತ್‌ಪುರ ತಾಲೂಕಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕುಟುಂಬಸ್ಥರಿಗೆ, ಚಾಲಕನಿಗೆ ಗಾಯ: ತೆಲುಗು ಧಾರಾವಾಹಿಗಳಲ್ಲೂ ಜನಪ್ರಿಯರಾಗಿದ್ದ ಪವಿತ್ರಾ ಮೂರು ದಿನಗಳ ಹಿಂದೆ ಶೂಟಿಂಗ್‌ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಶನಿವಾರ ರಾತ್ರಿ ತಮ್ಮ ಇಬ್ಬರು ಕುಟುಂಬ ಸದಸ್ಯರು ಹಾಗೂ ಚಾಲಕನ ಜತೆ ಹೈದರಾಬಾದ್‌ಗೆ ವಾಪಸ್​ ಹೊರಟಿದ್ದರು. ಆದ್ರೆ ಮಹಬೂಬ್‌ನಗರದಲ್ಲಿ ಅಪಘಾತವಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಆ ಕೂಡಲೇ ಚಿಕಿತ್ಸೆಗಾಗಿ ಮಹಬೂಬ್‌ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಕುಟುಂಬಸ್ಥರು ಹಾಗೂ ಚಾಲಕ ಗಾಯಗೊಂಡಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ.

ಕನ್ನಡ, ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತರು:ಮೂಲತಃ ಕರ್ನಾಟಕದ ಮಂಡ್ಯದವರಾದ ಪವಿತ್ರಾ ಜಯರಾಮ್ ಕನ್ನಡ ಕಿರುತೆರೆ ಮೂಲಕ ಪ್ರೇಕ್ಷಕರಿಗೆ ಪರಿಚಯವಾದರು. ಜೋಕಾಲಿ ಧಾರಾವಾಹಿಯಿಂದ ತಮ್ಮ ನಟನಾ ವೃತ್ತಿಜೀವನ ಆರಂಭಿಸಿದರು. ಆ ನಂತರ ಕನ್ನಡದಲ್ಲಿ 'ರೋಬೋ ಫ್ಯಾಮಿಲಿ', 'ಗಾಳಿಪಟ', 'ರಾಧಾ ರಮಣ', 'ವಿದ್ಯಾ ವಿನಾಯಕ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ತ್ರಿನಯನಿ' ಮತ್ತು 'ನಿನ್ನೆ ಪೆಲ್ಲಡುತಾ' ಧಾರಾವಾಹಿಗಳ ಮೂಲಕ ತೆಲುಗು ಪ್ರೇಕ್ಷಕರಿಗೆ ಅಚ್ಚುಮೆಚ್ಚಾಗಿದ್ದರು.

ಇದನ್ನೂ ಓದಿ :ನಟ ಅಲ್ಲು ಅರ್ಜುನ್​ ವಿರುದ್ಧ ಪ್ರಕರಣ ದಾಖಲು: ಕಾರಣ? - Allu Arjun

ಪವಿತ್ರಾ ಜಯರಾಮ್ ಸಾವಿಗೆ ಸಂತಾಪ: ತೆಲುಗಿನಲ್ಲಿ 'ತ್ರಿನಯನಿ' ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇದರಲ್ಲಿ ಖಳನಾಯಕಿಯ ಪಾತ್ರದಲ್ಲಿ ಮಿಂಚು ಹರಿಸಿದ್ದರು. ಪವಿತ್ರಾ ಅವರ ನಿಧನದಿಂದ ಕನ್ನಡ ಮತ್ತು ತೆಲುಗು ಕಿರುತೆರೆ ಕಣ್ಣೀರಿಟ್ಟಿದೆ. ಪವಿತ್ರಾ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದರು. ಇವರ ನಟನೆ ಅಷ್ಟರ ಮಟ್ಟಿಗೆ ಜನಪ್ರಿಯವಾಗಿತ್ತು. ಆದ್ರೆ ವಿಧಿಯಾಟಕ್ಕೆ ಅವರಿಂದು ನಮ್ಮೊಂದಿಗಿಲ್ಲ. ಪವಿತ್ರಾ ಇನ್ನು ನೆನಪು ಮಾತ್ರ. ನಟಿ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿ, ಸಹನಟರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಿದ್ದಾರೆ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದಿದ್ದಾರೆ.

ಇದನ್ನೂ ಓದಿ :ರಾಮ್​ ಚರಣ್​​, ಅಲ್ಲು ಅರ್ಜುನ್​​​ ಸುತ್ತುವರಿದ ಸಾವಿರಾರು ಅಭಿಮಾನಿಗಳು: ವಿಡಿಯೋ ನೋಡಿ - Ram Charan Allu Arjun

ABOUT THE AUTHOR

...view details