ಚಿಕ್ಕಮಗಳೂರು: ಆರು ಮಂದಿ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಲು ಸಿದ್ದರಾಗಿದ್ದಾರೆ. ಇಂದು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ನಕ್ಸಲ್ ನಾಯಕರಿಬ್ಬರು ವಿಡಿಯೋ ಮೂಲಕ ಅನಿಸಿಕೆ ಹಂಚಿಕೊಂಡಿದ್ಧಾರೆ.
ಶಾಂತಿಗಾಗಿ ನಾಗರಿಕ ವೇದಿಕೆಯು ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ಬಳಿಕ ಆರು ಜನ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಪ್ರಮುಖವಾಗಿ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಅವರು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಲಿದ್ದಾರೆ.
ನಕ್ಸಲ್ ನಾಯಕ ಮಾರಪ್ಪ ಅರೋಳಿ ಹೇಳಿದ್ದೇನು?: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಅರೋಳಿ ಗ್ರಾಮದ ನಕ್ಸಲ್ ಮಾರಪ್ಪ ಅರೋಳಿ ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ್ದಾರೆ. ''ನಾನು ಮುಖ್ಯವಾಹಿನಿಗೆ ಬರಲು ನಾಗರಿಕ ಹಕ್ಕು ವೇದಿಕೆ ಹಾಗೂ ಪುನರ್ವಸತಿ ಒಕ್ಕೂಟ ಕೂಡ ಶ್ರಮ ವಹಿಸಿದೆ. ಪುನರ್ವಸತಿ ಪ್ಯಾಕೇಜ್ ನೀಡುವುದು ಹಾಗೂ ನಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಂಧಾನ, ಚರ್ಚೆ ನಡೆಸಿದ್ದಾರೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನನ್ನ ಹುಟ್ಟೂರಿನಲ್ಲಿ ತಾನು ಓದಿದ ಕಿರಿಯ ಪ್ರಾಥಮಿಕ ಶಾಲೆಗೆ ಪುನರ್ವಸತಿ ಪ್ಯಾಕೇಜ್ನ ಅರ್ಧ ಹಣವನ್ನು ವರ್ಗಾಯಿಸಬೇಕಾಗಿ ಕೇಳಿಕೊಳ್ಳುತ್ತೇನೆ'' ಎಂದು ಹೇಳಿದ್ಧಾರೆ.
ನಕ್ಸಲ್ ನಾಯಕಿ ಮುಂಡಗಾರು ಪ್ರತಿಕ್ರಿಯೆ: ಹಾಗೆಯೇ, ಪ್ರಮುಖ ನಕ್ಸಲ್ ನಾಯಕಿ ಮುಂಡಗಾರು ಲತಾ ಕೂಡ ತಮ್ಮ ಮುಂದಿನ ಆಶಯಗಳ ಬಗ್ಗೆ ಮಾತನಾಡಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಚಿಕ್ಕಮಗಳೂರಿಗೆ ಆಗಮಿಸುವ ಮುನ್ನಾ ಕಾಡಿನಲ್ಲಿ ಶರಣಾಗತಿಗೆ ಮುಂದಾಗಿರುವ ಆರು ಜನ ನಕ್ಸಲರು ಸಭೆ ನಡೆಸಿದ ಚರ್ಚಿಸಿದ ಬಳಿಕ ಮಾತನಾಡಿರುವ ಲತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
''ತಮ್ಮ ಕೊನೆಯ ಉಸಿರಿರುವವರೆಗೂ ಜನರ ಪರವಾಗಿ ಹೋರಾಟ ಮಾಡಲು ಕರ್ನಾಟಕ, ಕೇರಳ, ತಮಿಳುನಾಡಿನ ಆರು ಜನ ನಕ್ಸಲರು ಚರ್ಚೆ ಮಾಡಿ ನಿರ್ಧರಿಸಿದ್ದೇವೆ. ಹಲವಾರು ಪ್ರಜಾತಾಂತ್ರಿಕ, ಸಂವಿಧಾನ ಪರ ಹಾಗೂ ಜನಪರ ಹೋರಾಟವನ್ನು ನಾವು ಮಾಡುತ್ತೇವೆ. ಸದ್ಯದ ವಾಸ್ತವ ಸ್ಥಿತಿಗಳ ಬಗ್ಗೆ ಸಂಘಟಕರು ಮನವರಿಕೆ ಮಾಡಿಸಿದ್ದು, ಸರ್ಕಾರದ ಜೊತೆ ಸಂಧಾನಕ್ಕೆ ಯತ್ನಿಸಿದ್ದಾರೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತೇವೆ ಎಂಬ ಭರವಸೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದೇವೆ'' ಎಂದಿದ್ದಾರೆ.
ಇದನ್ನೂ ಓದಿ: 6 ಮಂದಿ ನಕ್ಸಲರ ಶರಣಾಗತಿ ಪ್ರಕ್ರಿಯೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆ