ದುಬೈ: 2017ರ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ವಿಜೇತ ತಂಡಕ್ಕೆ 2.24 ಮಿಲಿಯನ್ ಡಾಲರ್ (19.45 ಕೋಟಿ ರೂ.) ಹಣ ಹಾಗೂ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ರನ್ನರ್ ಅಪ್ ತಂಡಕ್ಕೆ 1.12 ಮಿಲಿಯನ್ ಡಾಲರ್ (9.72 ಕೋಟಿ ರೂ.) ಬಹುಮಾನ ಸಿಗಲಿದ್ದು, ಸೆಮಿಫೈನಲ್ನಲ್ಲಿ ಸೋತವರಿಗೆ ತಲಾ 5,60,000 ಡಾಲರ್ (4.86 ಕೋಟಿ ರೂ.) ಬಹುಮಾನ ನೀಡಲಾಗುವುದು.
ಚಾಂಪಿಯನ್ಸ್ ಟ್ರೋಫಿಯಲ್ಲಿನ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದ್ದು, ಪ್ರತಿ ಗುಂಪು ಪಂದ್ಯದ ವಿಜೇತ ತಂಡಕ್ಕೆ 34,000 ಯುಎಸ್ ಡಾಲರ್ಗಿಂತ (29 ಲಕ್ಷ ರೂ.) ಹೆಚ್ಚು ಮೊತ್ತದ ಬಹುಮಾನ ನೀಡಲಾಗುವುದು. 5 ಅಥವಾ 6ನೇ ಸ್ಥಾನ ಪಡೆಯುವ ತಂಡಗಳು ತಲಾ 3,50,000 ಡಾಲರ್ (3.04 ಕೋಟಿ ರೂ.) ಗಳಿಸಿದರೆ, ಏಳನೇ ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳು 1,40,000 ಡಾಲರ್ (1.21 ಕೋಟಿ ರೂ.) ಗಳಿಸಲಿವೆ.
ಇದಲ್ಲದೆ, ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಆಡಲಿರುವ ಎಲ್ಲಾ ಎಂಟು ತಂಡಗಳಿಗೆ ತಲಾ 1,25,000 ಡಾಲರ್ (1.08 ಕೋಟಿ ರೂ.) ಬಹುಮಾನದ ಭರವಸೆ ನೀಡಲಾಗಿದೆ. 1996 ರ ನಂತರ ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆಯುತ್ತಿದೆ. ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಗಳಲ್ಲಿ ಪಂದ್ಯಗಳು ನಡೆಯಲಿವೆ.
ಈ ವರ್ಷದ ಪಂದ್ಯಾವಳಿಯ ಸ್ವರೂಪವನ್ನು ನೋಡುವುದಾದರೆ- ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿವೆ. ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವಿಶ್ವದ ಅಗ್ರ ಎಂಟು ಏಕದಿನ ತಂಡಗಳೊಂದಿಗೆ ನಡೆಯಲಿದ್ದು, ಮಹಿಳಾ ಚಾಂಪಿಯನ್ಸ್ ಟ್ರೋಫಿ 2027 ರಲ್ಲಿ ಟಿ 20 ಸ್ವರೂಪದಲ್ಲಿ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಆಟಗಾರರೊಂದಿಗೆ ಕುಟುಂಬಸ್ಥರು ಹೋಗುವಂತಿಲ್ಲ