ಸೂಪರ್ ಹಿಟ್ ರಾಕ್‌ಸ್ಟಾರ್, ಮೆ ತೇರಾ ಹೀರೋ ಮತ್ತು ಹೌಸ್‌ಫುಲ್ 3 ಚಿತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ನರ್ಗಿಸ್ ಫಕ್ರಿ (Nargis Fakhri), ಅಮೆರಿಕ ಮೂಲದ ಉದ್ಯಮಿ ಟೋನಿ ಬೀಗ್ (Tony Beig) ಅವರೊಂದಿಗೆ ದಾಂಪತ್ಯ ಜೀವನ ಶುರು ಮಾಡಿದ್ದಾರೆ ಎಂದು ವರದಿಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಕಳೆದ ವಾರಾಂತ್ಯದಲ್ಲಿ ಕ್ಯಾಲಿಫೋರ್ನಿಯಾದ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ವಿವಾಹವನ್ನು ಗೌಪ್ಯವಾಗಿಡಲಾಗಿದ್ದರೂ, ಸುಳಿವುಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಟೋನಿ ಬೀಗ್ ಯಾರು? ಖ್ಯಾತ ಉದ್ಯಮಿ ಟೋನಿ ಬೀಗ್ ಡಿಯೋಜ್ ಗ್ರೂಪ್‌ನ ಅಧ್ಯಕ್ಷರು. ಅಲಾನಿಕ್, 8ಹೆಲ್ತ್ ಮತ್ತು ಓಯಸಿಸ್ ಅಪರಲ್ ಸೇರಿದಂತೆ ಹಲವು ಉದ್ಯಮಗಳನ್ನು ನೋಡಿಕೊಳ್ಳುತ್ತಾರೆ. 2006ರಲ್ಲಿ ಅವರ ಉದ್ಯಮ ಪ್ರಯಾಣ ಪ್ರಾರಂಭವಾಯಿತು. ಅಂದಿನಿಂದ, ಗ್ಲೋಬಲ್ ಬ್ಯುಸಿನೆಸ್ ವರ್ಲ್ಡ್ನಲ್ಲಿ ಸಖತ್ ಸ್ಟ್ರಾಂಗ್ ಆಗಿ ಗುರುತಿಸಿಕೊಂಡಿದ್ದಾರೆ.
1984ರಲ್ಲಿ ಕಾಶ್ಮೀರದಲ್ಲಿ ಜನಿಸಿದ ಟೋನಿ, ಪ್ರತಿಷ್ಠಿತ ಕುಟುಂಬದಿಂದ ಬಂದವರು. ತಂದೆ ಶಕೀಲ್ ಅಹ್ಮದ್ ಬೀಗ್, ಹಿಂದೆ ಜಮ್ಮು ಮತ್ತು ಕಾಶ್ಮೀರದ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಹೋದರ ಜಾನಿ ಬೀಗ್ ಟೆಲಿವಿಷನ್ ಪ್ರೊಡ್ಯೂಸರ್. ಟೋನಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ವಿಕ್ಟೋರಿಯಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಿಂದ ಬ್ಯುಸಿನೆಸ್, ಮ್ಯಾನೇಜ್ಮೆಂಟ್ ಆ್ಯಂಡ್ ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. 2005-06ರ ಸಂದರ್ಭ ಯುಎಸ್ ಮೂಲದ ಪ್ರಮುಖ ಬಟ್ಟೆ ಬ್ರ್ಯಾಂಡ್ ಅಲಾನಿಕ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಅವರ ವೃತ್ತಿಜೀವನ ಪ್ರಾರಂಭವಾಯಿತು.
ಭಾರತ, ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ವಾಸಿಸಿರುವ ಟೋನಿ, ಜಾಗತಿಕ ವ್ಯವಹಾರದಲ್ಲಿ ಪ್ರಭಾವಶಾಲಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರೈವೆಸಿಗೆ ಹೆಚ್ಚು ಮಹತ್ವ ಕೊಡುತ್ತಾರಾದರೂ, ನರ್ಗಿಸ್ ಫಕ್ರಿ ಅವರೊಂದಿಗಿನ ಸಂಬಂಧದಿಂದ ಸದ್ಯ ಸಖತ್ ಸುದ್ದಿಯಾಗುತ್ತಿದ್ದಾರೆ.