ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಉಪೇಂದ್ರ ಅವರ 'ಎ' ಎಂಬಂತಹ ಒಂದೇ ಅಕ್ಷರದ ಸಿನಿಮಾಗಳು ತೀರಾ ಅಪರೂಪ. ಇದೀಗ ಹೊಸಬರ ತಂಡವೊಂದು 'ಸಿ' ಎನ್ನುವ ಒಂದೇ ಅಕ್ಷರದ ಶೀರ್ಷಿಕೆಯೊಂದಿಗೆ ಚಿತ್ರಮಂದಿರಕ್ಕೆ ಬರಲು ಸಿದ್ಧತೆ ನಡೆಸಿದೆ. ಒಂದೇ ಅಕ್ಷರದ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ ಈಗಾಗಲೇ ಟೀಸರ್ ಮತ್ತು ಕಂದಾ ಕಂದಾ ಎಂಬ ಹಾಡಿನ ಮೂಲಕ ಅಭಿಮಾನಿಗಳ ಗಮನ ಸೆಳೆದಿದೆ. ಹೊಸಬರ 'ಸಿ' ಚಿತ್ರಕ್ಕೆ ನಟ ಲೂಸ್ ಮಾದ ಯೋಗಿ ಮತ್ತು ಖ್ಯಾತ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಬೆಂಬಲ ದೊರೆತಿದೆ.
ಸದ್ಯ ಸಿನಿಮಾದ 'ಇದು ಎ ಅಲ್ಲ ಬಿ ಅಲ್ಲ ಸಿ...' ಎನ್ನುವ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಎ.ಬಿ.ಮುರಳಿಧರನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡನ್ನು ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಈ ಹಾಡನ್ನು ನಟ ಯೋಗಿ ರಿಲೀಸ್ ಮಾಡಿದರು. ಇತ್ತೀಚೆಗಷ್ಟೇ ಹಾಡು ಅನಾವರಣಗೊಳಿಸಿದ ಯೋಗಿ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು. ಯೋಗಿ ಹೊಸ ಚಿತ್ರತಂಡದ ಬೆನ್ನಿಗೆ ನಿಂತಿರುವುದು 'ಸಿ' ಟೀಮ್ಗೆ ಖುಷಿ ತಂದಿದೆ. ಇನ್ನು ವಿ.ನಾಗೇಂದ್ರ ಪ್ರಸಾದ್ ಕೂಡ 'ಸಿ'ನಿಮಾದ ಹಾಡನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇಡೀ ಸಿನಿಮಾಗೆ ಒಳ್ಳೆಯದಾಗಲಿ, ಕನ್ನಡ ಚಿತ್ರರಂಗ ಬೆಳೆಯಲಿ ಎಂದು ಹಾರೈಸಿದ್ದಾರೆ.
'ಸಿ' ಕಣ್ಣು ಕಾಣದ ಮಗಳು ಹಾಗೂ ಅಪ್ಪನ ನಡುವಿನ ಬಾಂಧವ್ಯದ ಕಥೆ. ಕಣ್ಣು ಕಾಣದ ಮಗಳ ಆಸೆಯನ್ನು ನೆರವೇರಿಸಲು ತಂದೆ ಎಷ್ಟೆಲ್ಲಾ ಕಷ್ಟ ಪಡುತ್ತಾರೆ ಎಂಬ ಅಂಶಗಳನ್ನು ಒಳಗೊಂಡಿದೆ. ಮಗಳಿಗಾಗಿ ಅಪ್ಪನ ಹೋರಾಟದ ಕಥೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಿರಣ್ ಸುಬ್ರಮಣಿ. ಕಿರಣ್ ನಿರ್ದೇಶನದ ಜೊತೆಗೆ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.