ಕನ್ನಡ ಚಿತ್ರರಂಗದ ಕೀರ್ತಿ, ಅಭಿನಯ ಚಕ್ರವರ್ತಿ ಸುದೀಪ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಮ್ಯಾಕ್ಸ್' ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಅಮೋಘ ಅಭಿನಯ, ವ್ಯಕ್ತಿತ್ವ, ನಡೆನುಡಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಕಿಚ್ಚನ ಮುಂದಿನ ಸಿನಿಮಾ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಸಜ್ಜಾಗಿದ್ದಾರೆ. ಪ್ರಮೋಶನ್ ಭಾಗವಾಗಿ ಇತ್ತೀಚೆಗೆ 'Lions roar' ಶೀರ್ಷಿಕೆಯ ಹಾಡು ಅನಾವರಣಗೊಂಡಿದೆ.
ಕಲೈಪುಲಿ ಎಸ್.ತನು ಅವರ ವಿ.ಕ್ರಿಯೇಷನ್ಸ್ ಹಾಗೂ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ 'ಮ್ಯಾಕ್ಸ್' ಸಿನಿಮಾಗೆ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸುದೀಪ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಬಹುನಿರೀಕ್ಷಿತ ಚಿತ್ರಕ್ಕಾಗಿ ಅನೂಪ್ ಭಂಡಾರಿ ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ 'Lions roar' ಶೀರ್ಷಿಕೆಯ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಇತ್ತೀಚೆಗೆ ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ.
ಬೆಂಗಳೂರಿನ ಒರಾಯನ್ ಮಾಲ್ನ ಆವರಣದಲ್ಲಿರುವ ಕೆರೆಯಂಗಳದಲ್ಲಿ ನಡೆದ ವರ್ಣರಂಜಿತ ಸಮಾರಂಭಕ್ಕೆ ಸಹಸ್ರಾರು ಅಭಿಮಾನಿಗಳು ಸಾಕ್ಷಿಯಾದರು. ಮ್ಯಾಕ್ಸ್ ಸಿನಿಮಾದ ಸಾಂಗ್ ಹಾಗೂ ಟ್ರೇಲರ್ಗೆ ಅಭಿಮಾನಿಗಳು ಫಿದಾ ಆದ್ರು. ಕಿಚ್ಚ ಸುದೀಪ್, ನಿರ್ಮಾಪಕ ಕಲೈಪುಲಿ ಎಸ್ ತನು, ನಿರ್ದೇಶಕ ವಿಜಯ್ ಕಾರ್ತಿಕೇಯ, ನಟಿಯರಾದ ಸಂಯುಕ್ತ ಹೊರನಾಡು, ಸುಕೃತ ವಾಗ್ಲೆ ಸೇರಿದಂತೆ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾಂಗ್ ರಿಲೀಸ್ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
''ನಿಮ್ಮನ್ನೆಲ್ಲಾ ನೋಡಿ ಬಹಳ ಖುಷಿ ಆಗುತ್ತಿದೆ. ಎರಡೂವರೆ ವರ್ಷಗಳ ನಂತರ ಡಿಸೆಂಬರ್ 25ರಂದು ನನ್ನ ಅಭಿನಯದ ಮ್ಯಾಕ್ಸ್ ಚಿತ್ರ ಬಿಡುಗಡೆಯಾಗುತ್ತಿದೆ. ತಡವಾಗಿರುವುದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಆದರೆ, ನಾವು ಲೇಟಾಗಿ ಬಂದರೂ ಲೇಟೆಸ್ಟಾಗಿ ಬರುತ್ತೇವೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ'' ಎಂದು ಸುದೀಪ್ ಮನವಿ ಮಾಡಿದರು.