ಸಿನಿಮಾ ನಿರ್ಮಾಪಕರ ಫೇವರೆಟ್ ಹೀರೋ, ಅಭಿಮಾನಿಗಳ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಇಂದಿಗೂ ಎಂದೆಂದಿಗೂ ಎವರ್ಗ್ರೀನ್ ಸ್ಟಾರ್. ವಯಸ್ಸು ಅರವತ್ತೆರಡಾದ್ರೂ ಯುವ ನಟರೂ ನಾಚುವಂತ ಫಿಟ್ನೆಸ್, ಎನರ್ಜಿ ಹೊಂದಿರುವ ಸೂಪರ್ ಸ್ಟಾರ್. ಹ್ಯಾಟ್ರಿಕ್ ಹೀರೋ ಸದ್ಯ ತಮ್ಮ ಮುಂದಿನ ಬಹುನಿರೀಕ್ಷಿತ ಭೈರತಿ ರಣಗಲ್ ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಟನ ಅನಾರೋಗ್ಯದ ಸುದ್ದಿಯೊಂದು ರಿವೀಲ್ ಆಗಿದೆ.
ಹೌದು, ನೋಡಲು ಸಖತ್ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿರುವ ಶಿವರಾಜ್ಕುಮಾರ್ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ, ಹ್ಯಾಟ್ರಿಕ್ ಹೀರೋ ಇನ್ನು ಕೆಲವು ದಿನಗಳ ಕಾಲ ಅಭಿಮಾನಿಗಳು ಹಾಗೂ ಸಿನಿಮಾ ನಿರ್ದೇಶಕರು, ನಿರ್ಮಾಪಕರ ಭೇಟಿಗೆ ಸಿಗೋದಿಲ್ಲ. ಭೈರತಿ ರಣಗಲ್ ಸುಮಾರು ಒಂದು ತಿಂಗಳ ಕಾಲ ಸೂಕ್ತ ಚಿಕಿತ್ಸೆಗೆ ಒಳಗಾಗಲಿದ್ದಾರೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸೆಂಚುರಿ ಸ್ಟಾರ್ನ ಗೆಳೆಯರೊಬ್ಬರು ಹೇಳುವ ಪ್ರಕಾರ, ಬಹುನಿರೀಕ್ಷಿತ ಭೈರತಿ ರಣಗಲ್ ಬಿಡುಗಡೆಗೆ ಸಜ್ಜಾಗಿದೆ. ಅರ್ಜುನ್ ಜನ್ಯ ನಿರ್ದೇಶನದ 45, ಹೇಮಂತ್ ರಾವ್ ನಿರ್ದೇಶನದ ಭೈರವನ ಕೊನೆ ಪಾಠ, ತಮಿಳು ನಿರ್ದೇಶಕನ ಜೊತೆ ಹೆಸರಿಡದ ಚಿತ್ರ.. ಹೀಗೆ 8 ರಿಂದ 10 ಸಿನಿಮಾಗಳು ಬುಕ್ಕಿಂಗ್ ಆಗಿವೆ. ಇಷ್ಟು ಸಿನಿಮಾಗಳಲ್ಲಿ ಸದ್ಯ ಭೈರತಿ ರಣಗಲ್ ಬಿಡುಗಡೆ ಆಗಲು ಸಜ್ಜಾಗಿದ್ರೆ, '45' ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿದ್ದಾರೆ. ಆರೋಗ್ಯ ಸಮಸ್ಯೆ ಹಿನ್ನೆಲೆ ಅಮೆರಿಕಕ್ಕೆ ತೆರಳುತ್ತಿದ್ದಾರೆ. ವರ್ಷದಿಂದ ಮನೆಯಲ್ಲೇ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು.
ಇನ್ನು ಅಭಿಮಾನಿಗಳು ಭಯ ಪಡುವ ಅಗತ್ಯ ಇಲ್ಲ. ಶಿವಣ್ಣ ಕೂಡಾ ನನಗೆ ಆರೋಗ್ಯ ಸಮಸ್ಯೆ ಇದೆ, ಚಿಕಿತ್ಸೆ ನಡೆಯುತ್ತಿದೆ ಅಂತಾ ತಿಳಿಸಿದ್ದಾರೆ. ಭೈರತಿ ರಣಗಲ್ ಚಿತ್ರ ಬಿಡುಗಡೆ ಆದ ಬಳಿಕ, ಬಹುಶಃ ಇದೇ ನವೆಂಬರ್ ಕೊನೆಗೆ ಅಥವಾ ಡಿಸೆಂಬರ್ ತಿಂಗಳಲ್ಲಿ ಶಿವರಾಜ್ಕುಮಾರ್, ಪತ್ನಿ ಗೀತಾ ಸೇರಿದಂತೆ ಕೆಲ ಸ್ನೇಹಿತರು, ಕಟುಂಬಸ್ಥರು ಅಮೆರಿಕಕ್ಕೆ ತೆರಳಲಿದ್ದಾರೆ. ಒಂದು ತಿಂಗಳ ಕಾಲ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಆಪ್ತರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.