ಬಳ್ಳಾರಿ: 2024ರ ಏಪ್ರಿಲ್ನಿಂದ ಇದುವರೆಗೆ ಬಳ್ಳಾರಿಯಲ್ಲಿ 23 ಮಂದಿ ಬಾಣಂತಿಯರು ಮೃತಪಟ್ಟಿದ್ದಾರೆ. ಸರ್ಕಾರಕ್ಕೆ ಜಿಲ್ಲಾಡಳಿತ ಸಲ್ಲಿಸಿದ ಅಡಿಟ್ ರಿಪೋರ್ಟ್‌ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ವರದಿ ಬಗ್ಗೆ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ''ಪ್ರತಿ ತಿಂಗಳೂ ಕೂಡ ಜಿಲ್ಲಾಧಿಕಾರಿ ಹಂತದಲ್ಲಿ ವರದಿ ಪರಿಶೀಲನೆ ಮಾಡಲಾಗುತ್ತದೆ. ನಮ್ಮ ಜಿಲ್ಲೆಯವು ಹಾಗೂ ಬೇರೆ ಕಡೆಯಿಂದ ರೆಫರ್ ಆದ ಪ್ರಕರಣಗಳೂ ಇದರಲ್ಲಿ ಸೇರಿವೆ. ಈ ವರ್ಷ ನಮ್ಮ ಜಿಲ್ಲೆಯಲ್ಲಿ ಏಪ್ರಿಲ್ನಿಂದ ಈವರೆಗೆ 23 ಬಾಣಂತಿಯರ ಸಾವಾಗಿದೆ. ಕಳೆದ ವರ್ಷ 39 ಸಾವು ಪ್ರಕರಣಗಳಾಗಿದ್ದವು'' ಎಂದು ತಿಳಿಸಿದರು.
''ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಪ್ರಮುಖ ಕಾರಣಗಳೆಂದರೆ, ಮೆಡಿಕಲ್ ಕಾಲೇಜು ಇರುವುದರಿಂದ ಹಾಗೂ ಉತ್ತಮ ವ್ಯವಸ್ಥೆಗಳಿರುವುದರಿಂದ ಪಕ್ಕದ ಜಿಲ್ಲೆಗಳಿಂದಲೂ ಕೂಡ ಸೂಕ್ಷ್ಮ ಪ್ರಕರಣಗಳು ಇಲ್ಲಿವೆ ಬರುತ್ತವೆ. ಅಲ್ಲದೆ, ಹೆರಿಗೆ ಸಂದರ್ಭದಲ್ಲಿ ಬಾಣಂತಿಯರಿಗೆ ಅಪೌಷ್ಟಿಕತೆ, ಅನಿಮಿಯಾ ಇತರೆ ಕಾಯಿಲೆಗಳು ಕಾಡುತ್ತಿವೆ. ಪೌಷ್ಠಿಕ ಆಹಾರ ತೆಗೆದುಕೊಳ್ಳದೇ ಇರುವುದರಿಂದ ಹೆರಿಗೆ ವೇಳೆ ಈ ಎಲ್ಲ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ, ಸಿಜೇರಿಯನ್ ಆಗುವ ಬಾಣಂತಿಯರೇ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಬಾಲ್ಯ ವಿವಾಹದಿಂದಾಗಿ ಬಹು ಅಂಗಾಂಗ ವೈಫಲ್ಯಗಳು ಬಾಣಂತಿಯರಲ್ಲಿ ಹೆಚ್ಚಾಗುತ್ತಿವೆ. ಬಾಣಂತಿಯರ ಸಾವಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಚಿಂತನೆ ನಡೆಸಿ, ವಿಶೇಷ ಕ್ರಮಕ್ಕೆ ಮುಂದಾಗಿದೆ'' ಎಂದು ತಿಳಿಸಿದರು.
ಒತ್ತಾಯಪೂರ್ವಕವಾಗಿ ಸಿಜೇರಿಯನ್ ಮಾಡಲಾಗುತ್ತದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಆ ತರಹ ಏನಿಲ್ಲ. ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಹಣ ತೆಗೆದುಕೊಳ್ಳುವುದಿಲ್ಲ. ಒಪಿಡಿ ಫೀಸ್ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಕಳೆದ ವರ್ಷ ಸುಮಾರು 6 ಸಾವಿರ ಹೆರಿಗೆಯಾಗಿದ್ದು, ಅದರಲ್ಲಿ ಶೇ.70ರಷ್ಟು ಸಿಜೇರಿಯನ್ ಆಗಿವೆ. ಬೇರೆ ಆಸ್ಪತ್ರೆಗಳಲ್ಲಿ ನಾರ್ಮಲ್ ಡಿಲೆವರಿ ಆಗದಿದ್ದರೆ ಜಿಲ್ಲಾಸ್ಪತ್ರೆಗೆ ರೆಫರ್ ಆಗುವುದು ಜಾಸ್ತಿ'' ಎಂದು ಮಾಹಿತಿ ನೀಡಿದರು.
ಬಾಣಂತಿಯರ ಸಾವಿನ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಜನರು ಬರುವುದು ಕಡಿಮೆಯಾಗುತ್ತಿದೆ ಎಂಬ ಪ್ರಶ್ನೆಗೆ, ''ಆರಂಭದಲ್ಲಿ ಹಾಗೆಯೇ ಆಗಿತ್ತು. ನವೆಂಬರ್ 12ರಿಂದ 20ರ ವರೆಗೆ ನಾವೇ ಕಡಿಮೆ ಕೇಸ್ ತೆಗೆದುಕೊಳ್ಳುತ್ತಿದ್ದೆವು. ಯಾವ ಕಾರಣಕ್ಕೆ ಸಾವುಗಳಾಗುತ್ತಿವೆ ಎಂಬ ಕಾರಣ ತಿಳಿಯುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಜಿಲ್ಲಾಸ್ಪತ್ರೆಗೆ ಕರೆತರುವಂತೆ ಆಗ ತಿಳಿಸಲಾಗಿತ್ತು. ಇತ್ತೀಚೆಗೆ ಮತ್ತೆ ಹೆರಿಗೆಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ'' ಎಂದು ವಿವರಿಸಿದರು.
ಇದನ್ನೂ ಓದಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ