ನಟ ಶಿವರಾಜ್ಕುಮಾರ್ ಅವರು ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರು ಹೋದಲ್ಲೆಲ್ಲ ಫ್ಯಾನ್ಸ್ ಕಿಕ್ಕಿರಿದು ನೆರೆಯುತ್ತಾರೆ. ಅವರು ಸಿನಿಮಾ ಸೆಟ್ಗೆ ಬಂದರೆ ಅದ್ದೂರಿ ಸ್ವಾಗತ ಸಿಗುತ್ತದೆ. ಅವರು ಇಂದು ಉತ್ತರಕಾಂಡ ಸಿನಿಮಾ ಸೆಟ್ಗೆ ಎಂಟ್ರಿ ಕೊಟ್ಟಿದ್ದು, ಸಿನಿಮಾ ತಂಡದವರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಈ ವೇಳೆ, ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಶಿವಣ್ಣ ಅವರ ಮುಖವಾಡ ಧರಿಸಿದ್ದು, ವಿಶೇಷವಾಗಿತ್ತು.
ಉತ್ತರಕಾಂಡ ಚಿತ್ರದ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದ ಗಮನ ಸೆಳೆಯುತ್ತಿದೆ. ಈ ಚಿತ್ರದ ಮುಹೂರ್ತ 2022ರಲ್ಲಿ ಆಗಿತ್ತು. ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ ಹಾಗೂ ಚಿತ್ರವು ಉತ್ತರ ಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಈ ಚಿತ್ರದ ಶೂಟಿಂಗ್ ಉತ್ತರ ಕರ್ನಾಟಕದ ಕೆಲವೊಂದು ಜಿಲ್ಲೆಗಳಲ್ಲಿ ಭರದಿಂದ ನಡೆಯುತ್ತಿದೆ. ಈಗಾಗಲೇ ವಿಜಯಪುರ ಕೆಲವೊಂದು ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡಿರೋ ಚಿತ್ರತಂಡ, ಈಗ ಬೆಳಗಾವಿಯ ಸುಂದರವಾದ ಸ್ಥಳಗಳಲ್ಲಿ ಶೂಟಿಂಗ್ ಮಾಡುತ್ತಿದೆ. ಉತ್ತರಕಾಂಡ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.