'ರೋಸಿ' ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿರುವ ಹೊಸ ಸಿನಿಮಾ. ಲೂಸ್ ಮಾದ ಯೋಗಿ ಕೆರಿಯರ್ನಲ್ಲಿ 50ನೇ ಚಿತ್ರ ಎಂಬ ವಿಶೇಷತೆಗೂ ಪಾತ್ರವಾಗಿರುವ ಈ ಚಿತ್ರ ಸ್ಯಾಂಡಲ್ವುಡ್ನಲ್ಲಿ ಸುದ್ದಿಯಾಗುತ್ತಿದೆ.
ಚಿತ್ರೀಕರಣ ನಡೆಯುತ್ತಿರುವ ರೋಸಿ ತಂಡದಲ್ಲಿ ಸ್ಟಾರ್ಗಳ ದಂಡು ಹೆಚ್ಚಾಗುತ್ತಿದೆ. ಈಗ ಮತ್ತೊಬ್ಬ ನಟ ಸೇರಿಕೊಂಡಿದ್ದಾರೆ. ಈ ಕುರಿತು ನಿರ್ದೇಶಕ ಶೂನ್ಯ ಮಾತನಾಡುತ್ತಾ, 'ರೋಸಿ' ಸ್ಟೈಲಿಶ್ ಗ್ಯಾಂಗ್ಸ್ಟಾರ್ ಡ್ರಾಮ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಲಿಯೋ ಚಿತ್ರದ ಸ್ಯಾಂಡಿ ಆ್ಯಕ್ಟ್ ಮಾಡುತ್ತಿದ್ದಾರೆ. ಇದೀಗ ಒರಟ ಪ್ರಶಾಂತ್ ಬಹಳ ದಿನಗಳ ನಂತರ ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಸ್ವಾಮಿ ಅಣ್ಣ' ಎನ್ನುವುದು ಅವರ ಪಾತ್ರದ ಹೆಸರು. ಇನ್ನೂ ಎರಡು ಪ್ರಮುಖ ಪಾತ್ರಗಳಿದ್ದು, ಸದ್ಯದಲ್ಲೇ ಮಾಹಿತಿ ನೀಡುತ್ತೇನೆ" ಎಂದರು. ಒರಟ ಪ್ರಶಾಂತ್ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆಯಾಗಿದೆ.
ಒರಟ ಪ್ರಶಾಂತ್ ಮಾತನಾಡಿ, "ನನಗೆ ಬಹಳ ಅವಕಾಶಗಳು ಬಂದವು. ಆದರೆ, ಒಪ್ಪಿರಲಿಲ್ಲ. ಶೂನ್ಯ ಅವರು ಹೇಳಿದ ಕಥೆ ಹಾಗೂ ನನ್ನ ಪಾತ್ರ ಇಷ್ಟವಾಯಿತು. ಹಾಗಾಗಿ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಯೋಗಿ ಅವರ ಜೊತೆಗೆ ಅಭಿನಯಿಸುವ ಆಸೆಯಿತ್ತು. ಅದು ಈ ಮೂಲಕ ಈಡೇರುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.