ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆಯಿಂದಲೇ ಟಾಕ್ ಆಗುತ್ತಿರುವ ಚಿತ್ರ 'ಕರಾವಳಿ'. ಲವರ್ ಬಾಯ್ ಇಮೇಜ್ನಲ್ಲೇ ಗಮನ ಸೆಳೆಯುತ್ತಿದ್ದ ಪ್ರಜ್ವಲ್ ದೇವರಾಜ್ ಈ 'ಕರಾವಳಿ' ಚಿತ್ರದಲ್ಲಿ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇತ್ತೀಚಿಗಷ್ಟೇ ನಾಯಕಿ ಸಂಪದ ಅವರನ್ನು ಪರಿಚಯಿಸಿದ್ದ ಚಿತ್ರತಂಡ ಇದೀಗ ಮತ್ತೊಂದು ಮಹತ್ವದ ಪಾತ್ರದ ಪರಿಚಯ ಮಾಡಿಕೊಡುವ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಹೌದು, ಕರಾವಳಿ ಸಿನಿಮಾಗೆ ಖ್ಯಾತ ನಟ ಮಿತ್ರ ಎಂಟ್ರಿ ಕೊಟ್ಟಿದ್ದಾರೆ. ಮಹಾಶಿವರಾತ್ರಿಯ ಪ್ರಯುಕ್ತ ನಟ ಮಿತ್ರ ಅವರ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ಚಿತ್ರತಂಡ ಅವರಿಗೆ ಸ್ವಾಗತ ಕೋರಿದೆ.
ಕರಾವಳಿ ಚಿತ್ರದಲ್ಲಿ ನಟ ಮಿತ್ರ ಸಿನಿಮಾದಲ್ಲಿ ನಾಯಕ ನಾಯಕಿಯ ಜೊತೆ ಪೋಷಕ ಪಾತ್ರಗಳು ಸಹ ಅಷ್ಟೇ ಪ್ರಮುಖ ಪಾತ್ರ ನಿರ್ವಹಿಸುತ್ತದೆ. 'ಕರಾವಳಿ'ಯಲ್ಲೂ ನಟ ಮಿತ್ರ ಅವರು ನಿರ್ವಹಿಸುತ್ತಿರುವ ಪಾತ್ರ ಅಷ್ಟೇ ಮಹತ್ವದಾಗಿದೆ. ಸದ್ಯ ರಿಲೀಸ್ ಆಗಿರುವ ಫಸ್ಟ್ ಲುಕ್ನಲ್ಲಿ ನಟ ಮಿತ್ರ ಎರಡು ಕೋಣಗಳನ್ನಿಡಿದು ನಿಂತಿದ್ದಾರೆ. ಅವರ ಹಿಂದೆ ಒಂದು ಲಾರಿ ನಿಂತಿದ್ದು, ಅದರ ಮೇಲೆ ಮಾರಣಕಟ್ಟೆ ಎಂದು ಬರೆಯಲಾಗಿದೆ. ಈ ಲುಕ್ ನೋಡ್ತಿದ್ರೆ ಮಿತ್ರ ಅವರ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗೋದೊಂತೂ ಪಕ್ಕಾ. ಮಹಾಬಲ ಪಾತ್ರದಲ್ಲಿ ಮಿತ್ರ ಮಿಂಚಲಿದ್ದಾರೆ.
ಇನ್ನೂ ಈ ಬಗ್ಗೆ ಮಾತನಾಡಿರುವ ಮಿತ್ರ, 'ನನ್ನ ಸಿನಿಜರ್ನಿಯಲ್ಲೇ ನಾನು ನಿರ್ವಹಿಸಿರದಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕ ಗುರುದತ್ ಗಾಣಿಗ ಅವರು ನನಗೆ ಅದ್ಭುತ ಪಾತ್ರ ನೀಡಿದ್ದಾರೆ. ಕರಾವಳಿ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ನನಗಿದೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಾಶಿವರಾತ್ರಿಗೆ ರಿವೀಲ್ ಆಯ್ತು 'ಕಣ್ಣಪ್ಪ' ಲುಕ್
ಇತ್ತೀಚಿಗಷ್ಟೇ ಮುಹೂರ್ತ ನೆರವೇರಿಸಿ ಚಿತ್ರೀಕರಣ ಶುರುಮಾಡಿರೋ ಚಿತ್ರತಂಡ ಕರಾವಳಿಯ ಸುತ್ತ-ಮುತ್ತ ಶೂಟಿಂಗ್ನಲ್ಲಿ ಬ್ಯುಸಿಯಾಗಿದೆ. ಚಿತ್ರಕ್ಕೆ ಗುರುದತ್ ಗಾಣಿಗ ಅವರ ನಿರ್ದೇಶನದ ಜೊತೆಗೆ ಅವರದ್ದೇ ಗಾಣಿಗ ಫಿಲ್ಮ್ಸ್ ಹಾಗೂ ವಿಕೆ ಫಿಲ್ಮ್ ಅಸೋಸಿಯೇಷನ್ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ನಡುವಿನ ಸಂಘರ್ಷದ ಕಥೆ. ಇದು ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ನಲ್ಲಿ ಮೂಡಿ ಬರಲಿದೆ. ಕಂಬಳ ಪ್ರಪಂಚದಲ್ಲಿ ನಡೆಯುತ್ತಿರುವ ಕಥೆಯಿದು. ಸಿನಿಮಾ ಸಂಪೂರ್ಣವಾಗಿ ಕಂಬಳದ ಬಗ್ಗೆ ಇರಲಿದೆ. ಸಿನಿಮಾಗೆ ಅಭಿಮನ್ಯು ಸದಾನಂದ್ ಕ್ಯಾಮರಾ ವರ್ಕ್, ಸಚಿನ್ ಬಸ್ರೂರು ಸಂಗೀತ ಇರಲಿದೆ. ಉಳಿದಂತೆ ಟಿ.ವಿ ಶ್ರೀಧರ್, ನಿರಂಜನ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.
ಇದನ್ನೂ ಓದಿ:ಸ್ಫೋಟ ಸಂಭವಿಸಿ ವಾರದ ಬಳಿಕ ರಾಮೇಶ್ವರಂ ಕೆಫೆ ಪುನರಾರಂಭ: ಮೆಟಲ್, ಹ್ಯಾಂಡ್ ಡಿಟೆಕ್ಟರ್ ಅಳವಡಿಕೆ