ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆಗಳಲ್ಲಿ ದ್ವಾರಕೀಶ್ ಒಬ್ಬರು. ಇವರು ನಟನಾಗಿ ನಕ್ಕು ನಲಿಸಿದ ಹೃದಯಗಳು ಅಸಂಖ್ಯ. ನಿರ್ಮಾಪಕರಾಗಿ ಕಂಡ ಸೋಲು, ಗೆಲುವು, ಸಾಹಸ ಒಂದು ಸಾಮಾನ್ಯ ಜೀವ ಮಾಡುವಂಥದ್ದಲ್ಲ. ನಿರ್ದೇಶಕನಾಗಿಯೂ ಕೂಡಾ ಅಲ್ಲಲ್ಲಿ ಸಿನಿಮಾಭಿಮಾನಿಗಳು ಮೆಚ್ಚುವ ಕೆಲಸ ಮಾಡಿದ್ದಾರೆ.
ಮೊದಲ ಅವಕಾಶ: ದ್ವಾರಕೀಶ್ ಅವರು 1942ರ ಆಗಸ್ಟ್ 19ರಂದು ಹುಣಸೂರಿನಲ್ಲಿ ಜನಿಸಿದರು. ಮೈಸೂರಿನ ಬನುಮಯ್ಯ ಶಾಲೆ, ಶಾರದಾ ವಿಲಾಸ್ ಶಾಲೆ, ಸಿಪಿಸಿ ಪಾಲಿಟೆಕ್ನಿಕ್ ಮುಂತಾದೆಡೆ ವಿದ್ಯಾಭ್ಯಾಸ ನಡೆಸಿದರು. ಬಾಲ್ಯದಿಂದಲೂ ಇವರ ಮನದಲ್ಲಿ ಸಿನಿಮಾ ಕನಸು ತುಂಬಿ ತುಳುಕುತ್ತಿತ್ತು. 'ಇವ ಸಿನಿಮಾಗೆ ಓಡಿ ಹೋಗದಿರಲಿ' ಎಂದು ಅವರ ಅಣ್ಣ, ದ್ವಾರಕೀಶ್ ಓದುತ್ತಿದ್ದ ದಿನಗಳಲ್ಲೇ (ಈಗಲೂ ಮೈಸೂರಿನ ಗಾಂಧಿ ಚೌಕದಲ್ಲಿ ಅಸ್ತಿತ್ವದಲ್ಲಿರುವ) ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ಹಾಕಿಕೊಟ್ಟಿದ್ದರಂತೆ. ಆದರೆ ದ್ವಾರಕೀಶ್‌ಗೆ ಸಿನಿಮಾ ಮೇಲಿನ ಬಯಕೆ ಹೋಗಲಿಲ್ಲ. ಇದಕ್ಕಾಗಿ ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರಿಗೆ ದುಂಬಾಲು ಬಿದ್ದಿದ್ದರಂತೆ. ಹುಣಸೂರು ಕೃಷ್ಣಮೂರ್ತಿ ಮೊದಲು ಡಿಪ್ಲೋಮಾ ಓದು ಮುಗಿಸು, ಆಮೇಲೆ ಸಿನಿಮಾ ಮಾತು ಎಂದರಂತೆ. ಮುಂದೆ ಅವರು ಸಿ.ವಿ. ಶಂಕರ್ ನಿರ್ದೇಶನದಲ್ಲಿ ‘ವೀರಸಂಕಲ್ಪ’ದಲ್ಲಿ ದ್ವಾರಕೀಶ್‌ಗೆ ಮೊದಲ ಅವಕಾಶ ಒಲಿಯುವಂತೆ ಮಾಡಿದರು.
ಮೊದಲ ಶಾಟ್:ವೀರಸಂಕಲ್ಪ ಅನುಭವದ ಬಗ್ಗೆ ದ್ವಾರಕೀಶ್ ಹೇಳಿದ ಒಂದು ಮಾತು ನೆನಪಾಗುತ್ತದೆ. ಅವರು ಎದುರಿಸಿದ ಮೊದಲ ಶಾಟ್ ಸಿಂಹಾಸನ ಹತ್ತುವುದಾಗಿತ್ತಂತೆ. ಆ ಶಾಟ್ ಮುಗಿದ ತಕ್ಷಣ ಮೇಲೆ ಕುಳಿತಿದ್ದ ಕ್ಯಾಮರಾಮನ್ ನಿರ್ದೇಶಕರಿಗೆ, "ಸಾರ್ ಬೇಕಿದ್ದರೆ ಈಗಲೇ ಸಿಂಹಾಸನ ಇಳಿಯೋದು ಕೂಡಾ ಶಾಟ್ ತೆಗೆದುಬಿಡೋಣ, ಎರಡೂ ಕೆಲಸ ಒಟ್ಟಿಗೆ ಆಗಿಬಿಡುತ್ತೆ" ಅಂದಿದ್ದರಂತೆ. ಈ ಮಾತನ್ನು ದ್ವಾರಕೀಶ್ ತಮ್ಮ ಸಿನಿಮಾ ಬದುಕಿನಲ್ಲೂ ತಾದ್ಯಾತ್ಮವಾಗಿ ಕಂಡಿದ್ದಾರೆ!.
ಬಹಳಷ್ಟು ವೇಳೆ ಒಬ್ಬ ವ್ಯಕ್ತಿ ಸೋತಾಗ ಅವನು ಕೆಟ್ಟ ಚಿತ್ರ ಮಾಡಿದ ಎಂದೋ, ಅವನು ಯಾರೊಡನೆಯೋ ಕಿತ್ತಾಡಿದಾಗ ಇಷ್ಟಪಟ್ಟ ಬಣದ ಕಡೆ ವಾಲಿಕೊಂಡು ಈತ ಯಾವಾಗಲೂ ತರಲೆ ಅಂತಲೋ ಜನ ಅಭಿಪ್ರಾಯ ಕ್ರೋಡೀಕರಣಕ್ಕೆ ತೊಡಗುವುದು ಸಾಮಾನ್ಯ. ದ್ವಾರಕೀಶ್ ಅಂತಹ ಸಂದರ್ಭಗಳಲ್ಲಿ ಬಹಳಷ್ಟು ವೇಳೆ ನಮಗೆ ಕಂಡಿದ್ದಾರೆ. ಆದರೆ, ದ್ವಾರಕೀಶ್ ಎಂಬ ಪ್ರತಿಭಾವಂತ ಮತ್ತು ಸಾಹಸಿಯನ್ನು ಈ ಎಲ್ಲ ಪರಿಧಿಗಳ ಆಚೆ ನೋಡುವ ಅಗತ್ಯವಿದೆ.
ತಮ್ಮನ್ನು ತಾವೇ ಚಿತ್ರದ ವಸ್ತುವನ್ನಾಗಿಸಿಕೊಂಡಿದ್ದರು: ಅಂದು ದ್ವಾರಕೀಶ್ ತಮ್ಮ ನೆಗೆಟಿವ್ ಅಂಶಗಳನ್ನು ತಾವೇ ಅಣಕಿಸುತ್ತಾ, ಅದನ್ನೇ ತನ್ನ ಪಾಸಿಟಿವ್ ಶಕ್ತಿಗಳನ್ನಾಗಿ ಮಾಡಿಕೊಂಡು ಮೇಲೆ ಬಂದವರು. ನಾನು ಎತ್ತರವಿಲ್ಲ, ‘ಕುಳ್ಳ’, ನನಗೆ ಬುದ್ಧಿ ಬೆಳೆದಿಲ್ಲ ಹಾಗಾಗಿ ‘ಪೆದ್ದ’, ಮಾತು ಸರಿಯಾಗಿ ಆಡೋಲ್ಲ ಹಾಗಾಗಿ ‘ಮೊದ್ದು’, ಮೂಗು ಸರಿ ಇಲ್ಲ ಹಾಗಾಗಿ ‘ಸೊಟ್ಟ’, ಸುಂದರತೆ ಇಲ್ಲ ‘ಜೀರೋ’ ಹೀಗೆ ಅವರು ತಮ್ಮನ್ನು ತಾವೇ ಗುರುತಿಸಿಕೊಂಡು, ಅದನ್ನೇ ತಮ್ಮ ಚಿತ್ರದ ವಸ್ತುವನ್ನಾಗಿಸಿಕೊಂಡು ಒಂದೊಂದೇ ಮೆಟ್ಟಿಲು ನಿರ್ಮಿಸಿಕೊಂಡು ಮೇಲೇರಿದರು.
‘ವೀರ ಸಂಕಲ್ಪ’, ‘ಸತ್ಯ ಹರಿಶ್ಚಂದ್ರ’, ‘ಪರೋಪಕಾರಿ’, ‘ಕ್ರಾಂತಿ ವೀರ’, ‘ಮೇಯರ್ ಮುತ್ತಣ್ಣ’, ‘ದೂರದ ಬೆಟ್ಟ’, ‘ಗಾಂಧೀನಗರ’, 'ಬಾಳು ಬೆಳಗಿತು', ‘ಬಂಗಾರದ ಮನುಷ್ಯ', 'ಬಹದ್ದೂರ್ ಗಂಡು' ಹೀಗೆ ನೀವು ಅಂದಿನ ಬಹಳಷ್ಟು ಚಿತ್ರಗಳಲ್ಲಿ ರಾಜ್ ಕುಮಾರ್ - ದ್ವಾರಕೀಶ್ ಜೋಡಿಯನ್ನು ಮೆಚ್ಚುಗೆಯಿಂದ ಕಾಣಬಹುದಿತ್ತು.
ಸಿನಿಮಾ ನಿರ್ಮಾಣಕ್ಕೂ ಸೈ:ಚಿತ್ರರಂಗಕ್ಕೆ ಬಂದ ಮೂರು ನಾಲ್ಕು ವರ್ಷಗಳಲ್ಲೇ ಸಿನಿಮಾ ನಿರ್ಮಾಣಕ್ಕೂ ದ್ವಾರಕೀಶ್ ಕೈ ಹಾಕಿದರು. ‘ಮೇಯರ್ ಮುತ್ತಣ್ಣ’ ಚಿತ್ರದ ಅವರ ನಿರ್ಮಾಣ ‘ಸಿದ್ಧಲಿಂಗಯ್ಯ’ ಅಂತಹ ಶ್ರೇಷ್ಠ ಚಿತ್ರ ನಿರ್ದೇಶಕನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿತು. ಅದಕ್ಕೂ ಮುಂಚೆ ದ್ವಾರಕೀಶ್ ಹಲವರೊಂದಿಗೆ ಕೂಡಿ ‘ಮಮತೆಯ ಬಂಧನ’ ಎಂಬ ಚಿತ್ರ ಕೂಡಾ ನಿರ್ಮಿಸಿದ್ದರು. ಮುಂದೆ ದ್ವಾರಕೀಶ್ ‘ಕುಳ್ಳ ಏಜೆಂಟ್ ಜೀರೋ ಜೀರೋ ಜೀರೋ’ ದಂತಹ ಚಿತ್ರ ನಿರ್ಮಿಸಿ ತಾವೇ ಹೀರೋ ಕೂಡಾ ಆದರು. ಅಂದು ಆ ಚಿತ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಯಿತೆಂದರೆ ತೆಲುಗು, ತಮಿಳು, ಮಲಯಾಳ, ಮರಾಠಿ ಭಾಷೆಗಳಲ್ಲಿ ಕೂಡಾ ನಿರ್ಮಾಣವಾಗಿ ದ್ವಾರಕೀಶ್ ಪ್ರಚಂಡ ಯಶಸ್ಸುಗಳಿಸಿದ್ದರು.
ರಸಪೂರ್ಣ ಪಾತ್ರಗಳು:ದ್ವಾರಕೀಶ್ ನಟನೆಯ ಕೆಲವೊಂದು ಚಿತ್ರಗಳಲ್ಲಿನ ಅವರ ಮುದ್ದು ಮುದ್ದಿನ ಅಭಿನಯದ ಬಗ್ಗೆ ಹೇಳುವುದಾದರೆ ‘ಮೇಯರ್ ಮುತ್ತಣ್ಣ’ ಚಿತ್ರದಲ್ಲಿ ಹಣದ ಬದಲು ಜೇಬಲ್ಲಿ ಜಿರಳೆ ಭದ್ರಪಡಿಸಿಕೊಂಡು ಹೋಟೆಲಿನಲ್ಲಿ ಎಲ್ಲಾ ತರಹದ ತಿಂಡಿ ತಿನ್ನೋದು; ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಬೇಕು ಅಂತ ಕೊಳದ ಬಳಿ ಕುಳಿತು, ನೀರು ಬಿಸಿ ಆಗ್ಲಿ ಅಂತ ಕಾಯ್ತಿದೀನಿ ಅನ್ನೋದು; ‘ಬಹದ್ದೂರ್ ಗಂಡು’ ಚಿತ್ರದಲ್ಲಿ ಪದೇ ಪದೇ ‘ನಾವೇನ್ ಮೂಲಂಗಿ ತಿನ್ತಾ ಇರ್ತೀವಾ’ ಅನ್ನೋದು; ಭಕ್ತ ಕುಂಬಾರ’ದಲ್ಲಿ ಕಣ್ಣು ಕಾಣದಂತೆ ಅವತಾರ ಮಾಡಿಕೊಂಡಿದ್ದ ಬಾಲಣ್ಣನಿಗೆ ಮಹಾಸ್ವಾಮಿ ಸಂಕೋಚ ಬೇಡ ಇನ್ನೊಂದ್ಸ್ವೊಲ್ಪ ಬಡಿಸಿಕೊಳ್ಳಿ” ಅಂತ ಹೇಳುತ್ತಾ, ತಾಯಿ ಊಟ ಬಡಿಸಿ ಆಚೆ ಹೋದ ನಂತರ ಅದನ್ನೆಲ್ಲಾ ತಾನೇ ತಿನ್ನೋದು, ‘ಗಲಾಟೆ ಸಂಸಾರ’ದಲ್ಲಿ ಮಂಜುಳಾ ಹಿಂದೆ ಭಗ್ನ ಪ್ರೇಮಿಯಾಗಿ ಅಲೆದಾಡೋದು; ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ‘ತದ್ದಿನ ದಿನ ದಿನ ತದ್ಧಿನ ನಾಳೆ ನಮ್ಮ ತಿಥಿ ದಿನ’ ಅಂತ ಕುಣಿಯೋದು; ‘ಮುದ್ಧಿನ ಮಾವ’ ಚಿತ್ರದಲ್ಲಿ ಭಿಕ್ಷುಕನಾಗಿ, ಮನೆಯ ಒಡೆಯ ದೊಡ್ಡಣ್ಣನಿಗೆ ನಾವಿಬ್ರೂ ಬೇರೆ ಬೇರೆ ತರದಲ್ಲಿ ಭಿಕ್ಷೆ ಬೇಡೋರೇ ಅನ್ನೋದು; ಪ್ರೊಫೆಸರ್ ಹುಚ್ಚೂರಾಯ ಚಿತ್ರದಲ್ಲಿ ನಿನ್ಮನೆ ಕಾಯಾ, ಎಂಟ್ಎಮ್ಮೆ ಕರೆಯಾ, ಸೆರಗನ್ನು ಹೊದೆಯೇ ನೀ ಗುಜ್ಜಾನೆ ಮರಿಯೇ’ ಅಂತ ವೈಶಾಲಿಯನ್ನು ರೇಗಿಸೋದು; ಗುರು ಶಿಷ್ಯರು ಚಿತ್ರದಲ್ಲಿ ‘ದೊಡ್ಡವರೆಲ್ಲಾ ಜಾಣರಲ್ಲ’ ಎಂದು ಹಾಡಿ ಕುಣಿದು ತನ್ನಂತ ಗಾಂಫ ಮಂಗಗಳಿಗೆ ನಾಯಕನಾಗಿರೋದು ಇಂಥಹ ರಸಪೂರ್ಣ ಗಳಿಗೆಗಳು ಅಸಂಖ್ಯಾತ.