ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 21 ವರ್ಷಗಳು ಕಳೆದಿವೆ. 2003ರ ಮಾರ್ಚ್ 28ರಂದು ಗಂಗೋತ್ರಿ ಸಿನಿಮಾ ಮೂಲಕ 'ಬನ್ನಿ' ಚಿತ್ರರಂಗಕ್ಕೆ ಪ್ರವೇಶಿಸಿದರು. ಸದ್ಯ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಳೆದ ವರ್ಷವಷ್ಟೇ ತಮ್ಮ ನಟನಾ ಕೌಶಲ್ಯಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇದೀಗ ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ ಅವರ ಮೇಣದ ಪ್ರತಿಮೆ ಅನಾವರಣಗೊಂಡಿದೆ.
ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಅವರ ಮೇಣದ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಅಲವೈಕುಂಠಪುರಂಲೋ ಚಿತ್ರದ ಅಲ್ಲು ಅರ್ಜುನ್ ಅವರ ಜಾಕೆಟ್ ಲುಕ್ ಮತ್ತು ತಮ್ಮ ಬ್ಲಾಕ್ಬಸ್ಟರ್ ಸಿನಿಮಾದ 'ತಗ್ಗೆದೆ ಲೆ' ಐಕಾನಿಕ್ ಪೋಸ್ ಅನ್ನು ಈ ಮೇಣದ ಪ್ರತಿಮೆ ಒಳಗೊಂಡಿದ್ದು, ಮಾರ್ಚ್ 28ರ ರಾತ್ರಿ ಅನಾವರಣ ಮಾಡಲಾಯ್ತು. ತಮ್ಮದೇ ಮೇಣದ ಪ್ರತಿಮೆ ಹೋಲುವಂತೆ ಕೆಂಪು ಬಣ್ಣದ ಸೂಟ್ ಧರಿಸಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ವ್ಯಾಕ್ಸ್ ಸ್ಟ್ಯಾಚೂ ಪಕ್ಕ ನಿಂತು ಅದರಂತೆ ಪೋಸ್ ಕೂಡ ಕೊಟ್ಟಿದ್ದಾರೆ.
ಮೇಣದ ಪ್ರತಿಮೆ ಲೋಕಾರ್ಪಣೆ ವೇಳೆ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಸಂಭ್ರಮ ಮುಗಿಲು ಮುಟ್ಟಿತ್ತು. ಅಪ್ಪನ ಪ್ರತಿಮೆ ಪಕ್ಕದಲ್ಲಿ ನಿಂತು ಅರ್ಹಾ ಕೂಡಾ ಅದರಂತೆಯೇ ಪೋಸ್ ಕೊಟ್ಟಿದ್ದಾಳೆ. ಮತ್ತೊಂದೆಡೆ ಪತ್ನಿ ಸ್ನೇಹಾ ರೆಡ್ಡಿ ಅಲ್ಲು ಅರ್ಜುನ್ಗೆ ಮುತ್ತಿಕ್ಕಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಸ್ಟೈಲಿಶ್ ಸ್ಟಾರ್ ಕೂಡ ತಮ್ಮದೇ ಮೇಣದ ಪ್ರತಿಮೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ, ತಗ್ಗೆದೆ ಲೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. 'ಬನ್ನಿ'ಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.