ಭಾರತೀಯ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡಿರುವ 'ಪುಷ್ಪಾ-2 ದಿ ರೂಲ್' ಪ್ರೀಮಿಯರ್ ಶೋ ವೇಳೆ ದುರಂತ ಸಂಭವಿಸಿತ್ತು. ಜನಸಂದಣಿಯಿಂದಾಗಿ ಮಹಿಳಾ ಅಭಿಮಾನಿ ರೇವತಿ (35) ಎಂಬುವವರು ಸಾವನ್ನಪ್ಪಿದ್ದರು. ಕಾಲ್ತುಳಿತದಲ್ಲಿ 13 ವರ್ಷ ವಯಸ್ಸಿನ ಮಗ ಶ್ರೀ ತೇಜ್ ತೀವ್ರವಾಗಿ ಗಾಯಗೊಂಡಿದ್ದರು. ಸದ್ಯ ಚಿಕಿತ್ಸೆ ಮುಂದುವರೆದಿದೆ. ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ಮೊದಲು ವಶಕ್ಕೆ ಪಡೆದು, ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಅರೆಸ್ಟ್ ಆಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಸಂಧ್ಯಾ ಥಿಯೇಟರ್ ಕೇಸ್: ಕಳೆದ ಬುಧವಾರ ಮಧ್ಯರಾತ್ರಿ ಪುಷ್ಪ 2 ಪ್ರೀ ರಿಲೀಸ್ ಶೋಗೆ ನಾಯಕ ನಟ ಅಲ್ಲು ಅರ್ಜುನ್ ಅವರು ಹೈದರಾಬಾದ್‌ನ ಜನಪ್ರಿಯ ಸಂಧ್ಯಾ ಥಿಯೇಟರ್‌ಗೆ ಆಗಮಿಸಿದ್ದರು. ತಮ್ಮ ಮೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ಸೇರಿದ್ದರು. ಕಾಲ್ತುಳಿತದಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದರು. ಅಲ್ಲು ಅರ್ಜುನ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು.
ಅಲ್ಲು ಅರ್ಜುನ್ ಅರೆಸ್ಟ್! (ETV Bharat) ಪೊಲೀಸ್ ಠಾಣೆ ತಲುಪಿದ ಕುಟುಂಬಸ್ಥರು:ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಮತ್ತು ಕಿರಿಯ ಸಹೋದರ, ನಟ ಅಲ್ಲು ಶಿರೀಶ್ ಅವರು ಚಿಕ್ಕಡಪಲ್ಲಿ ಪೊಲೀಸ್ ಠಾಣೆ ತಲುಪಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು:ಅಲ್ಲು ಅರ್ಜುನ್ ಭಾಗವಹಿಸಿದ್ದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದ ಸಂದರ್ಭದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು ಮತ್ತು ಅವರ ಮಗ ತೀವ್ರವಾಗಿ ಗಾಯಗೊಂಡಿದ್ದರು. ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಮ್ಯಾನೇಜ್ಮೆಂಟ್ ವಿರುದ್ಧ ಸೆಕ್ಷನ್ 105, 118 ಅಡಿ ಪ್ರಕರಣ ದಾಖಲಿಸಿದ್ದರು.
ಮೃತ ಮಹಿಳೆಯ ಪತಿ ನೀಡಿದ ದೂರಿನ ಮೇರೆಗೆ ಡಿ.5 ರಂದು ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೈದರಾಬಾದ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಅಲ್ಲು ಅರ್ಜುನ್ ಥಿಯೇಟರ್‌ಗೆ ಭೇಟಿ ನೀಡುವ ಕುರಿತು ಥಿಯೇಟರ್ ಆಡಳಿತ ಅಥವಾ ನಟರ ತಂಡದಿಂದ ಯಾವುದೇ ಸೂಚನೆ ಬಂದಿರಲಿಲ್ಲ. ಥಿಯೇಟರ್ ಆಡಳಿತವು ಜನಸಂದಣಿಯನ್ನು ನಿರ್ವಹಿಸಲು, ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿರಲಿಲ್ಲ.
ಇದನ್ನೂ ಓದಿ:ಪುಷ್ಪ 2 ಕಲೆಕ್ಷನ್: ಅಬ್ಬಬ್ಬಾ 6 ದಿನಗಳಲ್ಲಿ ₹1,000 ಕೋಟಿ; ಭಾರತದಲ್ಲೆಷ್ಟು? ಸಂಪೂರ್ಣ ಮಾಹಿತಿ
ತಮ್ಮ ಮೆಚ್ಚಿನ ನಟನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರಿಂದ ರೇವತಿ (35) ಮತ್ತು ಅವರ ಮಗ ಶ್ರೀ ತೇಜ್ (13) ಕಾಲ್ತುಳಿತಕ್ಕೆ ಒಳಗಾಗಿ ಉಸಿರುಗಟ್ಟಿದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ತಕ್ಷಣ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ಸಾರ್ವಜನಿಕರಿದ್ದ ಸ್ಥಳದಿಂದ ಹೊರಕರೆತಂದು ಸಿಪಿಆರ್ ಮಾಡಿ ತಕ್ಷಣವೇ ಅವರನ್ನು ಹತ್ತಿರದ ದುರ್ಗಾಬಾಯಿ ದೇಶ್ಮುಖ್ ಆಸ್ಪತ್ರೆಗೆ ಸಾಗಿಸಿದ್ದರು. ದುರ್ಗಾಬಾಯಿ ದೇಶ್ಮುಖ್ ಆಸ್ಪತ್ರೆಯ ವೈದ್ಯರು ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿಸಿ, ಉತ್ತಮ ಚಿಕಿತ್ಸೆಗಾಗಿ ಮಗ ಶ್ರೀ ತೇಜ್‌ನನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು
ಇದನ್ನೂ ಓದಿ:ಮಹಿಳಾ ಅಭಿಮಾನಿ ಸಾವು; ಮೃತಳ ಕುಟುಂಬಕ್ಕೆ ಅಗತ್ಯ ನೆರವಿನ ಭರವಸೆ ನೀಡಿದ ಅಲ್ಲು ಅರ್ಜುನ್ ತಂಡ
ಡಿಸೆಂಬರ್ 6ರಂದು ಅಲ್ಲು ಅರ್ಜುನ್ ಅವರು ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ಧನ ಘೋಷಿಸಿದ್ದರು. ಘಟನೆ ಬಗ್ಗೆ ತ್ರೀವ್ರ ದುಃಖ ವ್ಯಕ್ತಪಡಿಸಿದ್ದರು. ದುಃಖದಲ್ಲಿರುವ ಕುಟುಂಬವನ್ನು ಖುದ್ದು ಭೇಟಿ ಮಾಡುವುದಾಗಿ ಮತ್ತು ಸಾಧ್ಯವಿರುವ ಎಲ್ಲಾ ಸಹಾಯ ನೀಡುವುದಾಗಿ ನಟ ಭರವಸೆ ನೀಡಿದ್ದರು. ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಅಲ್ಲು ಅರ್ಜುನ್ ಭರವಸೆ ನೀಡಿದ್ದರು.