ಹೈದರಾಬಾದ್: ಇತ್ತೀಚಿಗೆ ಅನಾರೋಗ್ಯದಿಂದ ಮೃತಪಟ್ಟ ದಂಗಲ್ ಚಿತ್ರದ ಬಾಲನಟಿಯಾಗಿದ್ದ ಸುಹಾನಿ ಭಟ್ನಾಗರ್ ಕುಟುಂಬಸ್ಥರನ್ನು ನಟ ಅಮೀರ್ ಖಾನ್ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಗುರುವಾರ ಸಂಜೆ ಫರಿದಾಬಾದ್ನ ಸುಹಾನಿ ಮನೆಗೆ ಭೇಟಿ ನೀಡಿದ ಅವರು ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಇದೇ ವೇಳೆ ಸುಹಾನಿ ಅವರ ಅನಾರೋಗ್ಯ ಸಮಸ್ಯೆ ಕುರಿತ ಮಾಹಿತಿಯನ್ನು ಪಡೆದರು ಎಂದು ಸುಹಾನಿ ಚಿಕ್ಕಪ್ಪ ನವನೀತ್ ಭಟ್ನಾಗರ್ ತಿಳಿಸಿದ್ದಾರೆ.
ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾದಲ್ಲಿ ಸುಹಾನಿ ಬಾಲ್ಯದ ಬಬಿತಾ ಪೋಗಟ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಳು. 19 ವರ್ಷದ ಸುಹಾನಿ ಡರ್ಮಟೊಮಿಯೊಸಿಟಿಸ್ ಎಂಬ ಅನಾರೋಗ್ಯದಿಂದ ಸಾವನ್ನಪ್ಪಿದ್ದಳು. ಸ್ನಾಯು ಪಾರ್ಶ್ವವಾಯು ಮತ್ತು ಚರ್ಮದ ದದ್ದುಗಳಿಗೆ ಕಾರಣವಾಗುವ ಅಪರೂಪದ ಊರಿಯುತದ ಕಾಯಿಲೆ ಇದಾಗಿದೆ. ಮಗಳ ಶ್ವಾಸಕೋಶದಲ್ಲಿ ಅತಿ ಹೆಚ್ಚಿನ ದ್ರವ ಶೇಖರಣೆಕೊಂಡು ಸೋಂಕಿಗೆ ಒಳಗಾಗಿದ್ದಳು ಎಂದು ಸುಹಾನಿ ತಂದೆ ಸುಮಿತ್ ಭಟ್ನಾಗರ್ ಮಾಹಿತಿ ನೀಡಿದರು.
ಸುದ್ದಿ ಸಂಸ್ಥೆಯೊಂದರ ವರದಿ ಪ್ರಕಾರ, ಅಮೀರ್ ಖಾನ್ ಸುಹಾನಿ ಮನೆಗೆ ಭೇಟಿ ನೀಡಿದ್ದನ್ನು ನವನೀತ್ ಭಟ್ನಾಗರ್ ದೃಢಪಡಿಸಿದ್ದಾರೆ. ಭೇಟಿ ವೇಳೆ ನಟ ಕಂಬನಿ ಮಿಡಿದಿದ್ದು, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಅಮೀರ್ ಖಾನ್ ನಿರ್ಮಾಣ ಸಂಸ್ಥೆ ಕೂಡ ಸುಹಾನಿ ಸಾವಿಗೆ ಬೇಸರ ವ್ಯಕ್ತಪಡಿಸಿ, ಸಂತಾಪ ಸೂಚಿಸಿತ್ತು. ಸುಹಾನಿ ಇನ್ನಿಲ್ಲ ಎಂಬ ಅಂಶ ನಮಗೆ ಬೇಸರ ಮೂಡಿಸಿದೆ. ಆಕೆಯ ತಾಯಿ ಪೂಜಾ ಮತ್ತು ಅವರ ಕುಟುಂಬಕ್ಕೆ ತಮ್ಮ ಸಾಂತ್ವನ ತಿಳಸುತ್ತೇವೆ. ಸುಹಾನಿ ಪ್ರತಿಭಾವಂತ, ಟೀಮ್ ಪ್ಲೇಯರ್ ಯುವತಿ. ಆಕೆ ಇಲ್ಲದೇ ದಂಗಲ್ ಅಪೂರ್ಣವಾಗಿರುತ್ತಿತ್ತು ಎಂದು ಪ್ರಕಟಿಸಿದ್ದರು.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸುಹಾನಿ ತಾಯಿ, ಅಮೀರ್ ಖಾನ್ ಮತ್ತು ತಮ್ಮ ಮಗಳ ಬಾಂಧವ್ಯದ ಕುರಿತು ತಿಳಿಸಿದ್ದರು. ಈ ವೇಳೆ ಅವರ ಬೆಂಬಲಕ್ಕೆ ಕೃತಜ್ಞತೆಯನ್ನು ತಿಳಿಸಿದ್ದರು. ಅಮೀರ್ ಸರ್ ಮಗಳ ಸಂಪರ್ಕದಲ್ಲಿ ಸದಾ ಇದ್ದಾರೆ. ಅವರೊಬ್ಬ ಅದ್ಭುತ ವ್ಯಕ್ತಿ. ಅವರ ಬಳಿ ಈ ರೀತಿ ನಾವು ಎಂದೂ ಹೇಳಿಲ್ಲ. ಆಕೆಯ ಸಮಸ್ಯೆ ಬಗ್ಗೆ ಕೂಡ ನಾವು ಹೇಳಿರಲಿಲ್ಲ. ನಾವು ಇದರ ಬಗ್ಗೆ ಹೆಚ್ಚು ಕಾಳಜಿಯಿಂದ ಇದ್ದೇವು. ಒಂದು ವೇಳೆ ನಾವು ಅವರನ್ನು ಸಂಪರ್ಕಿಸಿದ್ದರೆ, ತಕ್ಷಣಕ್ಕೆ ಅವರು ಸಹಾಯ ಮಾಡುತ್ತಿದ್ದರು. ಅಷ್ಟೇ ಅಲ್ಲ, ತಮ್ಮ ಮಗಳ ಮದುವೆಗೆ ಅವರು ನಮಗೆ ವೈಯಕ್ತಿಕವಾಗಿ ಆಮಂತ್ರಣ ನೀಡಿದ್ದು, ಸಮಾರಂಭದಲ್ಲಿ ಭಾಗಿಯಾಗುವಂತೆ ತಿಳಿಸಿದ್ದರು ಎಂದಿದ್ದರು.
ಇದನ್ನೂ ಓದಿ:ಅಮೀರ್ ಖಾನ್ 'ದಂಗಲ್' ಸಹನಟಿ ಸುಹಾನಿ ಭಟ್ನಾಗರ್ ಇನ್ನಿಲ್ಲ! 19ನೇ ವಯಸ್ಸಿಗೆ ವಿಧಿವಶ